ವಕ್ಫ್ ನೋಟಿಸ್ ವಾಪಸಾತಿ ನಾಟಕ: ದಾಖಲೆ ಬಿಚ್ಚಿಟ್ಟ ಆರ್ ಆಶೋಕ್

Krishnaveni K

ಶನಿವಾರ, 9 ನವೆಂಬರ್ 2024 (15:09 IST)
ಬೆಂಗಳೂರು: ವಕ್ಫ್ ಆಸ್ತಿ ಎಂದು ರೈತರ ಜಮೀನು ಪಹಣಿಯಲ್ಲಿ ದಾಖಲಾಗಿರುವುದಕ್ಕೆ ನೀಡಿರುವ ನೋಟಿಸ್ ಗಳನ್ನು ಹಿಂಪಡೆಯಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿರುವುದೆಲ್ಲಾ ನಾಟಕ ಎಂದು ವಿಪಕ್ಷ ನಾಯಕ ಆರ್ ಅಶೋಕ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

‘ರಾಜ್ಯದಲ್ಲಿ ಕಾನ್ಯರ್ ರೀತಿ ಹಬ್ಬಿರುವ ವಕ್ಫ್ ಬೋರ್ಡ್ ರೈತರ ಜಮೀನು, ನೂರಾರು ವರ್ಷದಿಂದ ಪಿತ್ರಾರ್ಜಿತವಾಗಿ ಬಂದಿರುವ ಜಮೀನಿನ ಪಹಣಿಯಲ್ಲಿ ಏಕಾಏಕಿ ವಕ್ಫ್ ಎಂದು ನಮೂದಾಗಿದೆ. ನಿನ್ನೆ ಶ್ರೀರಂಗಪಟ್ಟಣ ಹೋಗಿದ್ದೆ. ಅಲ್ಲಿ 60 ವರ್ಷ ಹಿಂದಿನ ಸರ್ಕಾರೀ ಶಾಲೆ ವಕ್ಫ್ ಬೋರ್ಡ್ ಆಗಿದೆ. 400 ವರ್ಷ ಇತಿಹಾಸವಿರುವ ಚಿಕ್ಕಮ್ಮ ದೇವಸ್ಥಾನ ವಕ್ಫ್ ಬೋರ್ಡ್ ನದ್ದಾಗಿದೆ. ಅಲ್ಲಿ ಹೋಗಿ ಚೆಕ್ ಮಾಡಿದರೆ ಒಬ್ಬನೇ ಒಬ್ಬ ಮುಸ್ಲಿಮ್ ಇಲ್ಲ, ಮಸೀದಿಯೂ ಇಲ್ಲ. ಅಲ್ಲಿ ವಕ್ಫ್ ಬೋರ್ಡ್ ಕೈ ಚಳಕದಿಂದ ಆಸ್ತಿ ವಕ್ಫ್ ಆಸ್ತಿ ಎಂದಾಗಿದೆ.

ಇದರಿಂದಾಗಿ ರಾಜ್ಯದಲ್ಲಿ ಒಂದು ರೀತಿ ಭಯಭೀತಿಯಾದ ವಾತಾವರಣ ಸೃಷ್ಟಿಯಾಗಿದೆ. ಜನರ ಆಸ್ತಿಯನ್ನು ನುಂಗುವ ವಕ್ಫ್ ಬೋರ್ಡ್ ಗೆ ಜಮೀರ್ ಅವರು ಸಚಿವರು. ಜಮೀರ್ ಅವರ ಉಪಟಳದಿಂದ ರಾಜ್ಯದಲ್ಲಿ ಎಲ್ಲಾ ಕಡೆ ಜನ ಭಯಭೀತರಾಗಿದ್ದಾರೆ. ಮೊನ್ನೆ ಇದೇ ಸಂಬಂಧ ರಾಜ್ಯಾದ್ಯಂತ ಪ್ರತಿಭಟನೆ ಮಾಡಿದ್ದೆವು. ಆದರೆ ಮುಖ್ಯಮಂತ್ರಿಗಳು ಪತ್ರಿಕಾಗೋಷ್ಠಿ ಮಾಡಿ ನಾನು ನೋಟಿಸ್ ವಾಪಸ್ ಪಡೆಯುತ್ತೇವೆ ಎಂದರೂ ಬಿಜೆಪಿಯವರು ಮಾಡಕ್ಕೆ ಕೆಲಸ ಇಲ್ಲ ಅದಕ್ಕೆ ಪ್ರತಿಭಟನೆ ಮಾಡುತ್ತಿದ್ದಾರೆ ಎಂದರು.

ಆದರೆ ನಾನು ಸರ್ಕಾರವನ್ನು ಕೇಳಲು ಇಷ್ಟಪಡುತ್ತೇನೆ, ನಿಮಗೆ ಏನಾದರೂ ಮಾನ ಮರ್ಯಾದೆ ಇದ್ಯಾ? ಇದ್ರೆ 7.11.2024 ಸರ್ಕಾರದ ಮುಖ್ಯ ಕಾರ್ಯದರ್ಶಿ ಕಂದಾಯ ಇಲಾಖೆ ಅವರು ರಾಜ್ಯಮಟ್ಟದಲ್ಲಿ ವಕ್ಫ್ ಆಸ್ತಿ ಒತ್ತುವರಿ ಪ್ರಗತಿ ಸಾಧಿಸಿರುವ ಬಗ್ಗೆ ಸಭೆ ನಡೆಸುವ ಬಗ್ಗೆ ನಾಲ್ಕನೇ ಪರಿಶೀಲನೆ ಸಭೆಗೆ ಆಹ್ವಾನ ನೀಡಲಾಗಿದೆ. 21 ಸಾವಿರ ಎಕರೆ ವಕ್ಫ್ ಖಾತೆ ಬದಲಾವಣೆ ಬಾಕಿ ಇರುವ ಪ್ರಕರಣಗಳಲ್ಲಿ ಈ ಕೂಡಲೇ ಕೈಗೊಂಡಿರುವ ಕ್ರಮಗಳ ಬಗ್ಗೆ ಇಂದೇ ಮಾಹಿತಿ ಕೊಡಬೇಕು ಎಂದು ಯಾಕೆ ನೋಟಿಸ್ ಕೊಟ್ಟಿದ್ದೀರಿ. ಒಂದು ಕಡೆ ನೋಟಿಸ್ ವಾಪಸ್ ಮಾಡ್ತೀವಿ ಅಂತಾರೆ. ಇನ್ನೊಂದು ಕಡೆ ಇಂದೇ ಮಾಹಿತಿ ಕೊಡಿ ಎಂದು ಪತ್ರ ಬರೆಯುತ್ತಾರೆ. ಇದು ಸರ್ಕಾರದ ಬೂಟಾಟಿಕೆಗೆ ಸಾಕ್ಷಿ’ ಎಂದು ಆರ್ ಅಶೋಕ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ