ಬಿಜೆಪಿ ನಿಯೋಗವು, ಬೆಂಗಳೂರಿನಲ್ಲಿ ದುಬಾರಿ ಬೆಲೆ ಏರಿಕೆ ವಿರುದ್ಧ ಇಂದು ಬಿಬಿಎಂಪಿ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಿತು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಆರ್. ಅಶೋಕ್ ಅವರು, ಇಡೀ ದೇಶದಲ್ಲಿ ಕಸ ವಿಲೇವಾರಿಗೆ ಗರಿಷ್ಠ ತೆರಿಗೆ ಹಾಕಿದ ಪುಣ್ಯಾತ್ಮರು ಈ ಕಾಂಗ್ರೆಸ್ಸಿನವರು ಎಂದರು. ಹಾಲಿನಿಂದ ಆಲ್ಕೋಹಾಲ್ ವರೆಗೆ ದುಬಾರಿ ದರ ಏರಿüಸಲಾಗಿದೆ ಎಂದು ಟೀಕಿಸಿದರು. ದರ ಏರಿಸಿದ್ದರಿಂದ ಕರೆಂಟ್ ಮುಟ್ಟಿದರೆ ಶಾಕ್ ಹೊಡೆಯುವಂತಾಗಿದೆ ಎಂದು ದೂರಿದರು.
ಇವರು ಮನೆ ಕಟ್ಟುವವರಲ್ಲ; ಮನೆ ಹಾಳು ಮಾಡುವವರು ಎಂದರಲ್ಲದೆ, ಹಿಂದೆ ಕೆಂಪೇಗೌಡರು ನಾಡು ಕಟ್ಟಿ ನಾಡಪ್ರಭು ಎನಿಸಿದ್ದರು. ಕಾಂಗ್ರೆಸ್ಸಿನವರು ನಾಡು ಹಾಳು ಮಾಡಿದ ಬಿರುದನ್ನು ತೆಗೆದುಕೊಂಡಿದ್ದಾರೆ ಎಂದು ಟೀಕಿಸಿದರು. ಕಸದ ಸೆಸ್ 240 ಕೋಟಿ ಸಂಗ್ರಹವಾಗುತ್ತದೆ. ಕಸದ ನಿರ್ವಹಣೆಗೆ 145 ಕೋಟಿಗೆ ಟೆಂಡರ್ ಆಗಿದೆ. ಬಳಕೆದಾರರ ಶುಲ್ಕ ಸಂಗ್ರಹಿಸಿದರೆ 500ರಿಂದ 600 ಕೋಟಿ ಲಭಿಸಲಿದೆ ಎಂದು ವಿಶ್ಲೇಷಿಸಿದರು.
ಹಿಂದೆ ನಮ್ಮ ಸರಕಾರ ಇದ್ದಾಗ ಸಂಗ್ರಹಿಸಿದ ಕಸಕ್ಕೆ ಕೆಜಿ ಲೆಕ್ಕದಲ್ಲಿ ಸೆಸ್ ಸಂಗ್ರಹಿಸುತ್ತಿದ್ದೆವು. ಇವರು ನಿವೇಶನದ ಚದರಡಿ ಲೆಕ್ಕದಲ್ಲಿ ಶುಲ್ಕ ಪಡೆಯುತ್ತಾರೆ. ಇವರಿಗೆ ಗ್ಯಾರಂಟಿಗೆ ಹಣ ಹೊಂದಿಸಲು ಹೀಗೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಬೆಂಗಳೂರಿನ ಶಾಸಕರ ಸಭೆ ಕರೆದು ತೆರಿಗೆ ದರ ಹೆಚ್ಚಳಕ್ಕೆ ಕಾರಣ ಏನು? ಎಷ್ಟು ದರ ಏರಿಸಿದ್ದೀರಿ ಎಂಬ ಕುರಿತು ವಿವರವನ್ನು ಕೊಡುವಂತೆ ಅವರು ಆಗ್ರಹಿಸಿದರು. ಬಳಿಕ ಇದನ್ನು ಅನುಷ್ಠಾನಕ್ಕೆ ತರಲು ಒತ್ತಾಯಿಸಿದರು. ಚದರಡಿ ಲೆಕ್ಕದಲ್ಲಿ ಕಸದ ಶುಲ್ಕ ವಿಧಿಸದೆ ಅದನ್ನು ಕೆಜಿ ಲೆಕ್ಕದಲ್ಲಿ ವಿಧಿಸುವಂತೆ ಕೋರಿದ್ದೇವೆ ಎಂದು ವಿವರ ನೀಡಿದರು.
ಇಲ್ಲವಾದರೆ ಬೆಂಗಳೂರಿನ ಜನರ ಶಾಪ ನಿಮಗೆ ತಟ್ಟಲಿದೆ ಎಂದು ಎಚ್ಚರಿಸಿದರು. ಚೆನ್ನೈ, ಮಹಾರಾಷ್ಟ್ರದ ನಗರಗಳು, ಕೊಚ್ಚಿ ಮೊದಲಾದ ಕಡೆ ಇಷ್ಟು ತೆರಿಗೆ ಇಲ್ಲ; ಗ್ಯಾರಂಟಿ ಅನುಷ್ಠಾನಕ್ಕಾಗಿ ಕಾಂಗ್ರೆಸ್ಸಿನವರು ಬೆಂಗಳೂರಿನ ಜನರ ಮೇಲೆ ಹೊರೆ ಹಾಕುತ್ತಿದ್ದಾರೆ ಎಂದು ಹೇಳಿದರು.