ನಮ್ಮದು ಗೂಂಡಾ ರಾಜ್ಯವಾಗಿದೆ: ಆರ್ ಅಶೋಕ್

Krishnaveni K

ಮಂಗಳವಾರ, 9 ಏಪ್ರಿಲ್ 2024 (09:34 IST)
ಬೆಂಗಳೂರು: ಕಾಂಗ್ರೆಸ್ ಕಾರ್ಯಕರ್ತರು ಗನ್ ಇಟ್ಟುಕೊಂಡು ಓಡಾಡುವ ಮೂಲಕ ತಮ್ಮದು ಗೂಂಡಾ ರಾಜ್ಯ ಎಂದು ತೋರಿಸಿಕೊಂಡಿದ್ದಾರೆ. ಇಂತಹ ಘಟನೆಯಿಂದ ಪೊಲೀಸ್ ಇಲಾಖೆ ಬದುಕಿದ್ದೂ ಸತ್ತಂತಾಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ ಅವರು ಹೇಳಿದರು.  
 
ಸುದ್ದಿಗಾರರೊಂದಿಗೆ ಇಂದು ಮಾತನಾಡಿದ ಅವರು, ಚುನಾವಣೆಯ ಸಂದರ್ಭದಲ್ಲಿ ಒಂದು ತಿಂಗಳು ಮುಂಚಿತವಾಗಿ ಗನ್ ವಾಪಸ್ ಕೊಡಬೇಕಾಗಿತ್ತು. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ ಎಂಬ ಕಾರಣಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಪೊಲೀಸರ ಮೇಲೆ ಒತ್ತಡ ಹಾಕಿ ಗನ್ ಅನ್ನು ಜೇಬಿನಲ್ಲಿ ಇಟ್ಟುಕೊಂಡು ಓಡಾಡುತ್ತಿದ್ದಾರೆ. ಇದು ಕಾಂಗ್ರೆಸ್ ಕಾರ್ಯಕರ್ತರೇ ಮಾಡುತ್ತಿರುವ ರೌಡಿಸಂ. ಅಂತಹವರು ಮುಖ್ಯಮಂತ್ರಿಗಳಿಗೆ ಹಾರ ಹಾಕುವ ಮೂಲಕ ನಾವು ಕಾನೂನು ಪಾಲನೆ ಮಾಡಲ್ಲ ಎಂಬ ಸಂದೇಶ ರವಾನಿಸಿದ್ದಾರೆ. ಇದೇ ಕಾಂಗ್ರೆಸ್ಸಿನ ಗೂಂಡಾ ರಾಜ್ಯ ಎಂದರು. 
 
ಚುನಾವಣಾ ಆಯೋಗಕ್ಕೆ ದೂರು:
ಇದು ಅತಿ ದೊಡ್ಡ ಭದ್ರತಾ ವೈಫಲ್ಯವಾಗಿದೆ. ಇನ್ನು ನಾಳೆಯ ದಿನಗಳಲ್ಲಿ ಯಾರಾದರೂ ಬಾಂಬ್ ಇಟ್ಟುಕೊಂಡು ಓಡಾಡಬಹುದು. ಇಂತಹ ಘಟನೆಯಿಂದ ಪೊಲೀಸ್ ಇಲಾಖೆ ಬದುಕಿದ್ದೂ ಸತ್ತಂತಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ ಎಂದು ನಾನು ಸದನದಲ್ಲೇ ಹೇಳಿದ್ದೆ. ಇದು ಕೂಡ ಒಂದು ನಿದರ್ಶನ. ಇದಕ್ಕೆ ಸರ್ಕಾರ ಏನು ಉತ್ತರ ಕೊಡಲಿದೆ ಎಂದು ಜನರು ನಿರೀಕ್ಷಿಸುತ್ತಿದ್ದಾರೆ. ಈ ಕುರಿತು ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಲಿದೆ ಎಂದು ತಿಳಿಸಿದರು.
 
ಕೇರಳ ಸರ್ಕಾರ ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಕ್ಕೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿತ್ತು. ಕರ್ನಾಟಕ ಸರ್ಕಾರ ಈಗಾಗಲೇ ಬರ ಪರಿಹಾರ ಬಿಡುಗಡೆ ಮಾಡಬೇಕಿದ್ದರೂ, ಚುನಾವಣೆಯ ಸಮಯದಲ್ಲಿ ಕೇಂದ್ರದ ಮೇಲೆ ಆರೋಪ ಮಾಡಲಾಗಿದೆ. ರಾಜ್ಯ ಸರ್ಕಾರ ಉಚಿತಗಳನ್ನು ನೀಡಿ ಹಣ ಖಾಲಿ ಮಾಡಿಕೊಂಡಿರುವುದರಿಂದ ಪರಿಹಾರ ನೀಡಲು ಹಣವಿಲ್ಲ ಎಂದು ಅವರು ವಿಶ್ಲೇಷಿಸಿದರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ