ಬೆಂಗಳೂರು: ರಾಜ್ಯ ಸರ್ಕಾರ ಜಾತಿ ಗಣತಿಯಾಗಿದೆ ಎಂದು ಸುಳ್ಳು ಸ್ಟಿಕ್ಕರ್ ಅಂಟಿಸಲು 25 ಲಕ್ಷ ರೂ. ಪೋಲು ಮಾಡಿ ಜನರ ತೆರಿಗೆ ದುಡ್ಡು ದಂಡ ಮಾಡಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಜಾತಿಗಣತಿ ಹೆಸರಿನಲ್ಲಿ ಸಿಬ್ಬಂದಿಗಳು ಅನೇಕ ಕಡೆ ಮನೆ ಮನೆಗೆ ತೆರಳಿ ಖುದ್ದಾಗಿ ಮನೆಯ ಸದಸ್ಯರ ವಿವರಣೆ ಪಡೆಯುವ ಬದಲು ಕೆಲವೆಡೆ ಸಮೀಕ್ಷೆಯಾಗಿದೆ ಎಂದು ಸುಮ್ ಸುಮ್ನೇ ಸ್ಟಿಕ್ಕರ್ ಅಂಟಿಸಿ ಬಂದಿದ್ದಾರೆ ಎಂದು ಆರೋಪ ಕೇಳಿಬಂದಿತ್ತು. ಇದಕ್ಕಾಗಿ ಸುಮಾರು 35 ಲಕ್ಷ ಸ್ಟಿಕ್ಕರ್ ಮುದ್ರಿಸಲಾಗಿತ್ತು. ಈ ಪೈಕಿ 25 ಲಕ್ಷ ರೂ. ಮೌಲ್ಯದ ಸ್ಟಿಕ್ಕರ್ ಅಂಟಿಸದೇ ವ್ಯರ್ಥವಾಗಿದೆ ಎಂಬ ಆರೋಪ ಕೇಳಿಬಂದಿದೆ.
ಇದರ ಬಗ್ಗೆ ಟ್ವೀಟ್ ಮಾಡಿ ಆರ್ ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಟಿಕ್ಕರ್ ಸರ್ವೇ ಸ್ಕ್ಯಾಮ್! ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ನೀಡುತ್ತೇವೆ ಎನ್ನುವ ನೆಪವೊಡ್ಡಿ ಸಿಎಂ ಸಿದ್ದರಾಮಯ್ಯ ಸರ್ಕಾರ ನಡೆಸುತ್ತಿರುವ ಬೂಟಾಟಿಕೆ ಸಮೀಕ್ಷೆಯಲ್ಲಿ ಪ್ರತಿ ಹಂತದಲ್ಲೂ ಭ್ರಷ್ಟಾಚಾರ ನಡೆಯುತ್ತಿದೆ.
ಬಾಗಿಲು ತಟ್ಟದೇ, ಸಾರ್ವಜನಿಕರನ್ನು ಮಾತನಾಡಿಸದೆ ಕೇವಲ ಸ್ಟಿಕ್ಕರ್ ಅಂಟಿಸಲು ಸೀಮಿತವಾಗಿರುವ ಸಮೀಕ್ಷೆಯಲ್ಲಿ ಈಗ ಸಿಟ್ಕರ್ ಮುದ್ರಣದಲ್ಲೂ ಲೂಟಿ ಹೊಡೆದ ಅಂಶ ಬೆಳಕಿಗೆ ಬಂದಿದೆ. ಬೇಕಾಬಿಟ್ಟಿಯಾಗಿ 87 ಲಕ್ಷ ರೂಪಾಯಿ ಮೌಲ್ಯದ ಸ್ಟಿಕ್ಕರ್ ಮುದ್ರಿಸಿ, ಈಗ 25 ಲಕ್ಷ ರೂಪಾಯಿ ಮೌಲ್ಯದ ಸ್ಟಿಕ್ಕರ್ ಗಳನ್ನು ಕಸದ ಬುಟ್ಟಿಗೆ ಎಸೆಯಲು ಹೊರಟಿರುವ ಕಾಂಗ್ರೆಸ್ ಸರ್ಕಾರ, ಜನರ ತೆರಿಗೆ ಹಣವನ್ನು ಹಗಲು ದರೋಡೆ ಮಾಡುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.