ಅಂಬೇಡ್ಕರ್ ಸತ್ತಾಗ ಆರಡಿ ಜಾಗಕೊಡದ ಕಾಂಗ್ರೆಸ್ ನವರಿಗೆ ನಾಚಿಕೆ ಆಗಲ್ವಾ: ಆರ್ ಅಶೋಕ್

Krishnaveni K

ಗುರುವಾರ, 19 ಡಿಸೆಂಬರ್ 2024 (13:54 IST)
ಬೆಳಗಾವಿ: ಸಂವಿಧಾನ ಕರ್ತೃ ಬಾಬಾಸಾಹೇಬ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ನಿರಂತರ ಅವಮಾನ ಮಾಡಿದ ಕಾಂಗ್ರೆಸ್ಸಿಗರಿಗೆ ಬಾಬಾಸಾಹೇಬರ ಫೋಟೊ ಹಿಡಿಯುವ ಯೋಗ್ಯತೆಯೂ ಇಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ಆಕ್ಷೇಪಿಸಿದರು.

ಇಂದು ಇಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ತಾವು ಡಾ. ಅಂಬೇಡ್ಕರ್ ಪರ ಇರುವುದಾಗಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿದ್ದಾರೆ. ಇವರಿಗೆ ಯಾವ ನೈತಿಕತೆ ಇದೆ? ಅವರ ಫೋಟೊ ಹಿಡಿಯುವ ಅಧಿಕಾರ, ಯೋಗ್ಯತೆ ಇವರಿಗೆ ಎಲ್ಲಿದೆ ಎಂದು ಪ್ರಶ್ನಿಸಿದರು.
ಮಹಾರಾಷ್ಟ್ರದ ಚುನಾವಣೆಯಲ್ಲಿ ಎರಡು ಬಾರಿ ಇಡೀ ಕಾಂಗ್ರೆಸ್ ಪಕ್ಷವೇ ಬಂದು ಅಂಬೇಡ್ಕರರನ್ನು ಸೋಲಿಸಿ ಸಂಭ್ರಮ ಆಚರಿಸಿದ್ದರು; ಪಟಾಕಿ ಹೊಡೆದಿದ್ದರು. ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು ಕೇಳಿದರು. ಸಂವಿಧಾನ ಬರೆದ ಡಾ. ಅಂಬೇಡ್ಕರರು ತೀರಿಕೊಂಡಾಗ ಆರಡಿ ಮೂರಡಿ ಜಾಗವನ್ನೂ ಕೊಡಲಿಲ್ಲ ಎಂದು ಟೀಕಿಸಿದರು.
 
ಕಾಂಗ್ರೆಸ್ಸಿನವರು ತೀರಿಕೊಂಡಾಗ ನೆಹರೂರಿಗೆ ದೆಹಲಿಯಲ್ಲಿ ಎಷ್ಟೆಕರೆ ಬೇಕೋ ಅಷ್ಟು ಎಕರೆ ಜಾಗ, ಇಂದಿರಾಗಾಂಧಿ ತೀರಿಕೊಂಡರೆ ಬರ್ಕೊಳ್ಳಿ 10 ಎಕರೆನೋ, 20 ಎಕರೆನೋ, ರಾಜೀವ್ ಗಾಂಧಿ ತೀರಿಕೊಂಡರೆ ಬರ್ಕೊಳ್ಳಿ ಒಂದೈವತ್ತು ಎಕರೆ ಎಂಬ ಸ್ಥಿತಿ ಇತ್ತು. ಆದರೆ, ಡಾ. ಅಂಬೇಡ್ಕರರು ತೀರಿಕೊಂಡಾಗ ಆರಡಿ ಮೂರಡಿ ಜಾಗವನ್ನೂ ಕೊಡದ ಪಾಪಿಗಳು ಈ ಕಾಂಗ್ರೆಸ್ಸಿಗರು ಎಂದು ವಿವರಿಸಿದರು. ಬೇಡಿದರೂ ಜಾಗ ಕೊಡದ ಕಾರಣ ಕೊನೆಗೆ ಅವರ ಅಂತ್ಯಸಂಸ್ಕಾರವನ್ನು ಮಹಾರಾಷ್ಟ್ರದಲ್ಲಿ ನೆರವೇರಿಸಬೇಕಾಯಿತು. ಇದಕ್ಕೆ ಮನೆಹಾಳ ಕಾಂಗ್ರೆಸ್ಸೇ ಕಾರಣ ಎಂದು ಟೀಕಿಸಿದರು.
 
ಇಂದಿರಾಗಾಂಧಿಗೆ ಭಾರತ ರತ್ನ, ನೆಹರೂಗೆ ಭಾರತ ರತ್ನ, ರಾಜೀವ್ ಗಾಂಧಿಗೂ ಭಾರತ ರತ್ನ, ಆದರೆ, ನೀವು ಡಾ. ಅಂಬೇಡ್ಕರರಿಗೆ ಯಾಕೆ ಕೊಟ್ಟಿಲ್ಲ? ಫೋಟೊ ಹಿಡಿದುಕೊಂಡು ಬಂದಿದ್ದೀರಲ್ಲವೇ? ಡಾ. ಅಂಬೇಡ್ಕರರಿಗೆ ಯಾಕೆ ಭಾರತ ರತ್ನ ಕೊಟ್ಟಿಲ್ಲ ಎಂದು ಪ್ರಶ್ನೆಯನ್ನು ಮುಂದಿಟ್ಟರು. ಡಾ. ಬಿ.ಆರ್.ಅಂಬೇಡ್ಕರ್ ಅವರ ಫೋಟೊ ಹಿಡಿಯುವ ಯೋಗ್ಯತೆಯೂ ನಿಮಗಿಲ್ಲ ಎಂದು ಖಂಡಿಸಿದರು.
ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಬಿಜೆಪಿ ಬೆಂಬಲಿತ ಸರಕಾರವು ಭಾರತ ರತ್ನ ನೀಡಿದೆ. ಲಂಡನ್ ಸೇರಿದಂತೆ ವಿವಿಧೆಡೆ ಡಾ. ಬಿ.ಆರ್.ಅಂಬೇಡ್ಕರ್ ಅವರ 5 ಪ್ರಮುಖ ಕೇಂದ್ರಗಳನ್ನೂ ಅಭಿವೃದ್ಧಿ ಮಾಡಿದ್ದೇವೆ. ಭಗವದ್ಗೀತೆಯಷ್ಟೇ ಪವಿತ್ರವಾದುದು ಈ ಸಂವಿಧಾನ ಎಂದು ಪ್ರಧಾನಮಂತ್ರಿಗಳು ಸಂಸತ್‍ಗೆ ತೆರಳುವಾಗ ಹೇಳಿದ್ದಾರೆ ಎಂದು ಗಮನ ಸೆಳೆದರು.
 
ನೀವೇನಾದರೂ ಈ ಜನ್ಮದಲ್ಲಿ ಈ ಮಾತನ್ನು ಹೇಳಿದ್ದೀರಾ ಎಂದು ಕಾಂಗ್ರೆಸ್ ಮುಖಂಡರನ್ನು ಪ್ರಶ್ನಿಸಿದರು. ಯಾವ ನೈತಿಕತೆ ಇಟ್ಟುಕೊಂಡು ಸದನವನ್ನು ಹಾಳು ಮಾಡುತ್ತಿದ್ದೀರಾ ಎಂದು ಕೇಳಿದರು. ಬಾಣಂತಿಯರ ನಿರಂತರ ಸಾವಿನ ಕಾರಣ ಇದನ್ನು ಕೊಲೆಗಡುಕ ಸರಕಾರ ಎಂದು ಕರೆಯುವುದಾಗಿ ಹೇಳಿದರು. ನೀವು ಸರಬರಾಜು ಮಾಡಿದ ಔಷಧಿಯಿಂದಲೇ ಸಾವಾಗಿದೆ ಎಂದು ರುಜುವಾತಾಗಿದೆ ಎಂದು ತಿಳಿಸಿದರು.
 
ಅವಧಿ ಮೀರಿದ ಔಷಧಿಗಳು ಅಲ್ಲಿವೆ. ನಾವು ಅವರ ರಾಜೀನಾಮೆ ಕೇಳಿದ್ದೆವು. ಆ ವಿಷಯ ಚರ್ಚೆಗೆ ಬರಬಾರದೆಂದು ಕುತಂತ್ರ ಮಾಡಿ, ಸದನ ನಡೆಯದಂತೆ ಹಾಳು ಮಾಡಲು ಕಾರಣಕರ್ತರಿದ್ದರೆ ಅದು ಕಾಂಗ್ರೆಸ್ ಪಕ್ಷ ಎಂದು ಆಕ್ಷೇಪಿಸಿದರು. ಇವರ ನಡೆಯನ್ನು ನಾವು ಖಂಡಿಸುತ್ತೇವೆ. ತಮ್ಮ ಮಾತಿನ ವಿಚಾರದ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ಅವರು ಈಗಾಗಲೇ ಸ್ಪಷ್ಟೀಕರಣ ಕೊಟ್ಟಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿಯವರೂ ಸ್ಪಷ್ಟನೆ ನೀಡಿದ್ದಾರೆ ಎಂದು ವಿವರಿಸಿದರು.
 
ಸದನ ಸರಿಯಾಗಿ ನಡೆಯಲು ಸ್ಪೀಕರ್ ಅವರು ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು. ಉತ್ತರ ಕರ್ನಾಟಕಕ್ಕೆ ಸಂಬಂಧಿಸಿ ಉತ್ತರಗಳನ್ನು ಕೊಡಬೇಕು ಎಂದು ಆಗ್ರಹಿಸಿದರು. ಮಳೆಯ ಕಾರಣಕ್ಕೆ ರೈತರು ಸಂಕಷ್ಟದಲ್ಲಿದ್ದು, ಅದಕ್ಕೆ ಉತ್ತರಿಸಬೇಕು ಎಂದು ಕೋರಿದರು.
 
ಇವರಿಗೆ ರಾಜಕೀಯವಾಗಿ ಏನಾದರೂ ಇದ್ದರೆ ಆಚೆ ಕಡೆ ತೀರಿಸಿಕೊಳ್ಳಲಿ; ಅಧಿವೇಶನದಲ್ಲಿ ಈ ರೀತಿ ಮಾಡುವುದು ಅಕ್ಷಮ್ಯ ಅಪರಾಧ ಎಂದು ಖಂಡಿಸಿದರು. ಬಾಣಂತಿಯರ ಸಾವಿನ ವಿಚಾರವಾಗಿ ಸಮರ್ಪಕ ಉತ್ತರ ಲಭಿಸದೆ ಇದ್ದರೆ ಹೋರಾಟ ಮಾಡಿಯೇ ಮಾಡುತ್ತೇವೆ ಎಂದು ಪ್ರಶ್ನೆಗೆ ಉತ್ತರ ಕೊಟ್ಟರು.
 
ಡಾ.ಅಂಬೇಡ್ಕರ್ ಅವರು ಮೀಸಲಾತಿ ಕೊಡಬೇಕೆಂದು ಸಂವಿಧಾನದಲ್ಲಿ ಅಳವಡಿಸಿದ್ದರು. ವಿದೇಶಕ್ಕೆ ತೆರಳಿದ್ದಾಗ ರಾಹುಲ್ ಗಾಂಧಿಯವರು ಅದನ್ನು ಪ್ರಶ್ನಿಸಿದ್ದರು. ಈ ರಿಸರ್ವೇಶನ್ ಬೇಡ ಎಂದು ನೆಹರೂ ಅವರು ಸಚಿವರಿಗೆ ಪತ್ರ ಬರೆದಿದ್ದರು ಎಂದು ಟೀಕಿಸಿದರು. ಇಷ್ಟೆಲ್ಲ ಮಾಡಿ ಡಾ.ಅಂಬೇಡ್ಕರ್ ಅವರ ಫೋಟೊ ಹಿಡ್ಕೊಂಡು ಬರ್ತೀರಲ್ಲ? ನಿಮಗೆ ನಾಚಿಕೆ ಆಗುವುದಿಲ್ಲವೇ ಎಂದು ಪ್ರಶ್ನೆಯನ್ನು ಮುಂದಿಟ್ಟರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ