ಸಿಎಂ, ಡಿಸಿಎಂಗೆ ಜವಾಬ್ಧಾರಿ ಇದ್ದಿದ್ದರೆ ಅತಿವೃಷ್ಟಿಗೆ ಪರಿಹಾರ ಒದಗಿಸುತ್ತಿದ್ದರು: ಆರ್ ಅಶೋಕ

Krishnaveni K

ಶುಕ್ರವಾರ, 3 ಅಕ್ಟೋಬರ್ 2025 (13:09 IST)
ಬೆಳಗಾವಿ: ಕಾಂಗ್ರೆಸ್ ಸರಕಾರ ಮತ್ತು ಮುಖ್ಯಮಂತ್ರಿಗಳಿಗೆ ಜವಾಬ್ದಾರಿ ಇದ್ದರೆ ಸಮರೋಪಾದಿಯಲ್ಲಿ ಅತಿವೃಷ್ಟಿ ಪೀಡಿತ ಪ್ರದೇಶಕ್ಕೆ ತೆರಳಿ ಪರಿಹಾರ ಕಾರ್ಯ ಒದಗಿಸಬೇಕಿತ್ತು ಎಂದು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಅವರು ತಿಳಿಸಿದ್ದಾರೆ.

ಅತಿವೃಷ್ಟಿಪೀಡಿತ ಪ್ರದೇಶಗಳಿಗೆ ಇಂದು ಭೇಟಿ ನೀಡಲು ಇಲ್ಲಿಗೆ ಆಗಮಿಸಿದ್ದ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ರಾಜ್ಯ ಸರಕಾರ ಜನರ ಪಾಲಿಗೆ ಸತ್ತಂತಿದೆ; ಈ ಸರಕಾರ ಬದುಕಿಲ್ಲ ಎಂದು ದೂರಿದರು.

ಬರಿಯ ಅಧಿಕಾರ ಜಂಜಾಟದಲ್ಲಿ ಇವರು ತೊಡಗಿದ್ದಾರೆ. ಮಾಧ್ಯಮಗಳಲ್ಲಿ ಕಳೆದ ಎರಡೂವರೆ ವರ್ಷಗಳಲ್ಲಿ ನಿರಂತರವಾಗಿ ಮುಖ್ಯಮಂತ್ರಿ ಬದಲಾವಣೆ, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ,  ಪರಮೇಶ್ವರ್ ಮುಖ್ಯಮಂತ್ರಿ,  ಜಾರಕಿಹೊಳಿ ಮುಖ್ಯಮಂತ್ರಿ ಎಂಬ ಸುದ್ದಿ ಬರುತ್ತಿದೆ. ಇದನ್ನು ಸರಕಾರ ಎನ್ನುತ್ತಾರಾ ಎಂದು ಕೇಳಿದರು.  ರಾಜ್ಯದ ಕಾಂಗ್ರೆಸ್ ಸರಕಾರ ಮತ್ತು ಮುಖ್ಯಮಂತ್ರಿಗಳಿಗೆ ಸಾಮಾನ್ಯ ಜ್ಞಾನ ಮತ್ತು ಜವಾಬ್ದಾರಿ ಇದ್ದಲ್ಲಿ ಇವರು ಅತಿವೃಷ್ಟಿಯಿಂದ ತೊಂದರೆಗೆ ಒಳಗಾದ ಪ್ರದೇಶಗಳಿಗೆ ತೆರಳಬೇಕಿತ್ತು ಎಂದು ಆಕ್ಷೇಪಿಸಿದರು.

ಎಷ್ಟು ಮನೆಗಳು ಬಿದ್ದಿದೆ ಎಂಬುದು ಮುಖ್ಯಮಂತ್ರಿಗಳ ಬಾಯಲ್ಲಿ ಬರುತ್ತಿಲ್ಲ. ಅತಿವೃಷ್ಟಿ ಪೀಡಿತ ಪ್ರದೇಶಗಳ ರೈತರು ಹಬ್ಬ ಆಚರಿಸಲಾಗದೆ ಬೀದಿಯಲ್ಲಿದ್ದಾರೆಂದು ಮಾಧ್ಯಮಗಳಲ್ಲಿ ಬರುತ್ತಿದೆ ಎಂದು ಗಮನ ಸೆಳೆದರು. ಇದು ತುಘಲಕ್ ಸರಕಾರ. ಇಂಥ ನೀಚ ಸರಕಾರವನ್ನು ಕರ್ನಾಟಕದಲ್ಲಿ ಯಾವತ್ತೂ ನೋಡಲು ಸಾಧ್ಯವಿಲ್ಲ ಎಂದು ಟೀಕಿಸಿದರು. ನಮ್ಮ ಮೇಲೆ ಶೇ 40 ಕಮಿಷನ್ ಆರೋಪ ಮಾಡಿದ್ದರು. ಅದು ಸಾಬೀತಾಗಿಲ್ಲ; ಅದರ ದುಪ್ಪಟ್ಟು ಕಮಿಷನ್ ಪಡೆಯುವ ಸರಕಾರ ಎಂದು ಗುತ್ತಿಗೆದಾರರು ಆರೋಪಿಸಿತ್ತಿದ್ದಾರೆ ಎಂದು ಗಮನಕ್ಕೆ ತಂದರು.
 
ಎಷ್ಟು ಬೆಳೆ ಹಾನಿ ಆಗಿದೆ ಎಂದು ಮುಖ್ಯಮಂತ್ರಿಗಳು ಕೊಟ್ಟ ಅಂಕಿಅಂಶವೂ ಅಪ್ಪಟ ಸುಳ್ಳು. ರೈತರು ಸಂಕಷ್ಟದಲ್ಲಿದ್ದರೆ, ಮುಖ್ಯಮಂತ್ರಿಗಳು ಆರಾಮ್‍ಸೇ ದಸರಾ ಉದ್ಘಾಟನೆ ನೆರವೇರಿಸಿ, ಸಂತೋಷ ಕೂಟದಲ್ಲಿ ಭಾಗಿಯಾಗಿ, ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಂಡಿದ್ದಾರೆ ಎಂದು ಟೀಕಿಸಿದರು.
ಇನ್ನೊಂದೆಡೆ ಕಾಂಗ್ರೆಸ್ ಪಕ್ಷದ ಶಾಸಕರು ಯಾವಾಗ ಇಳಿತೀಯಪ್ಪ ಮುಖ್ಯಮಂತ್ರಿ; ಯಾವಾಗ ಇಳಿತೀಯ ಸಿದ್ದರಾಮಯ್ಯ ಎಂದು ಪ್ರಶ್ನಿಸುತ್ತಿದ್ದಾರೆ. ರಂಗನಾಥ್, ಶಿವರಾಮೇಗೌಡರಿಂದ ಆರಂಭಿಸಿ ಎಲ್ಲರೂ ಯಾವಾಗ ಡಿ.ಕೆ.ಶಿವಕುಮಾರ್‍ಗೆ ಅಧಿಕಾರ ಹಸ್ತಾಂತರ ಮಾಡುತ್ತೀರಿ ಎಂಬ ಪ್ರಶ್ನೆ ಕೇಳುತ್ತಿದ್ದಾರೆ ಎಂದು ವಿವರಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ