ಇನ್ನೂ ಮೂರು ದಿನ ರಾಜ್ಯದಲ್ಲಿ ಮಳೆ: ಹವಾಮಾನ ಇಲಾಖೆ

ಗುರುವಾರ, 14 ಅಕ್ಟೋಬರ್ 2021 (20:48 IST)
ಬೆಂಗಳೂರು: ಕಳೆದ ಒಂದು ವಾರದಿಂದ ಎಡೆಬಿಡಡೆ ಬೀಳುತ್ತಿರುವ ಮಳೆ ಇನ್ನೂ ಮೂರು ದಿನಗಳ ಕಾಲ ಮುಂದುವರೆಯುವ ಸಾಧ್ಯತೆಗಳಿವೆ. ಬಂಗಾಳಕೊಲ್ಲಿ ಮತ್ತು ಅರಬ್ಬಿ ಸಮುದ್ರ ದಲ್ಲಿ ಉಂಟಾಗಿರುವ ಸುಳಿಗಾಳಿಯ ಪರಿಣಾಮದಿಂದ ರಾಜ್ಯದಲ್ಲಿ ಮೋಡಕವಿದ ವಾತಾವರಣವಿದ್ದು, ಬುಧವಾರ ಸಂಜೆ ಅಥವಾ ರಾತ್ರಿ ವೇಳೆಯಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 
 
ಕಳೆದೆರಡು ದಿನಗಳಿಂದಲೂ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗುತ್ತಿದೆ. ಇದರಿಂದ ಹಲವು ಕಡೆಗಳಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ತೊಂದರೆ ಉಂಟಾಗಿರುವುದು ವರದಿಯಾಗಿದೆ. ನೈರುತ್ಯ ಮುಂಗಾರು ಮರಳುವಿಕೆ ಪ್ರಕ್ರಿಯೆ ಆರಂಭವಾಗಿದ್ದು, ಇನ್ನೆರಡು ದಿನಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಹವಾಮಾನ ತಜ್ಞರು ಸಹ ತಿಳಿಸಿದ್ದಾರೆ.
 
ಮುಂಗಾರು ಮರಳುವಾಗ ಮತ್ತು ಈಶಾನ್ಯ ಹಿಂಗಾರು ಆರಂಭವಾಗುವ ಪರ್ವಕಾಲದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗುವುದು ವಾಡಿಕೆ. ಅದೇ ರೀತಿ ಈಗಲೂ ಮಳೆ ಮುಂದುವರೆದಿದೆ. ಅಕ್ಟೋಬರ್‌ ತಿಂಗಳಲ್ಲಿ  ವಾಡಿಕೆಗಿಂತ ಶೇ.50ರಷ್ಟು ಹೆಚ್ಚು ಮಳೆಯಾಗಲಿದೆ. ಈಗಾಗಲೇ ರಾಜ್ಯದಲ್ಲಿ ಬಿದ್ದಿದೆ. ಅಕ್ಟೋಬರ್ 16ರ ನಂತರ ಮಳೆ ಇಳಿಮುಖವಾಗಲಿದೆ ಎಂದು ಹವಮಾನ ತಜ್ಞರು ಹೇಳಿದ್ದಾರೆ. 
 
ಚಂಡಮಾರುತ ಒಡಿಶಾ ಕಡೆಗೆ: 
 
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಅದು ಚಂಡಮಾರುತವಾಗಿ ಪರಿವರ್ತನ ಯಾಗುತ್ತಿದೆ. ಆದರೂ ರಾಜ್ಯದ ಮೇಲೆ ಅದರ ನೇರ ಪರಿಣಾಮ ಉಂಟಾಗುವುದಿಲ್ಲ, ಚಂಡಮಾರುತವು ಒಡಿಶಾ ಕಡೆಗೆ ಚಲಿಸಿದೆ  ಹೀಗಾಗಿ ಅಕ್ಟೊಬರ್ 16ರ ನಂತರ ಮತ್ತೆ ವಾತಾವರಣದಲ್ಲಿ ಬದಲಾವಣೆ ಉಂಟಾಗಿ ಹಿಂಗಾರು ಮಳೆ ಆರಂಭವಾಗಲಿದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ