ತುಮಕೂರು :ಮುದ್ದಹನುಮೇಗೌಡರಿಗೆ ಟಿಕೆಟ್ ಕೊಡಲು ಮುರಳಿಧರ ಹಾಲಪ್ಪ ವಿರೋಧ ವ್ಯಕ್ತಪಡಿಸುತ್ತಿರೋ ವಿಚಾರವಾಗಿ ಪ್ರತಿಕ್ರಿಯಿಸಿದ ಕೆ.ಎನ್.ರಾಜಣ್ಣ, ಯಾವ ಸಿಕ್ಕಾಪಟ್ಟೆ ರೇಸ್ ನಡೀರೀ, ಯಾರ್ರೀ ಅವನು ಮುರಳೀಧರ ಹಾಲಪ್ಪ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ, ಅವನನ್ನು ನೀವೇ ರೇಸ್ ಗೆ ತಗೊಂಡೋಗಿ ಮುಂದೆ ಕೂರಿಸಿದ್ದೀರಿ ಅಷ್ಟೇ. ಯಾರಿಗೆ ವೋಟ್ ಹಾಕ್ಸಿದ್ದಾನ್ರೀ ಅವನು, ನನ್ನ ಕ್ಷೇತ್ರ ಮಧುಗಿರಿಯಲ್ಲಿ ನಾನು ಐದು ಚುನಾವಣೆ ನಡೆಸಿದ್ದೀನಿ. ಒಂದು ಚುನಾವಣೆಯಲ್ಲಿ ಒಂದು ವೋಟ್ ಹಾಕ್ಸಿದ್ದಾನಾ ಕೇಳ್ರಿ ಎಂದು ಪ್ರಹಾರ ನಡೆಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದ ಟಿಕೆಟ್ ಗಾಗಿ ಕಾಂಗ್ರೆಸ್ ನಾಯಕರ ನಡುವೆ ಬಹಿರಂಗ ಕದನ ಪ್ರಾರಂಭಗೊಂಡಿದೆ. ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿರುವ ಮುದ್ದಹನುಮೇಗೌಡರಿಗೆ ಟಿಕೆಟ್ ಖಚಿತ ಎಂದಿರುವ ಸಚಿವ ಕೆ.ಎನ್. ರಾಜಣ್ಣ, ಗೃಹಸಚಿವ ಜಿ. ಪರಮೇಶ್ವರ್ ಅವರ ಆಪ್ತ ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮುರಳೀಧರ ಹಾಲಪ್ಪ ವಿರುದ್ದ ಕಿಡಿಕಾರಿದ್ದಾರೆ.
ಜೊತೆಗೆ, ಬಿಜೆಪಿಯಿಂದ ಸೋಮಣ್ಣ ಟಿಕೆಟ್ ಸಿಗಬಹುದು ಎಂಬ ಸುದ್ದಿಗೆ ಪ್ರತಿಕ್ರಿಯಿಸಿ, ಆಕಾಶ ನೋಡೋದಕ್ಕೆ ನೂಕು ನುಗ್ಗಲಾ, ಯಾರು ಬೇಕಾದ್ರೂ ಸ್ಪರ್ಧೆ ಮಾಡಬಹುದು. ಸೋಮಣ್ಣ ಅವರು ಸ್ಪರ್ಧೆ ಮಾಡಲಿ, ಸೋಮಣ್ಣ ನಮ್ಮ ಸ್ನೇಹಿತರು. ಆದರೆ ರಾಜಕಾರಣವೇ ಬೇರೆ, ವಿಶ್ವಾಸವೇ ಬೇರೆ ಎಂದಿದ್ದು, ಮಾ. 10 ರೊಳಗೆ ಟಿಕೆಟ್ ಖಚಿತವಾಗಲಿದೆ ಎಂದಿದ್ದಾರೆ.