ತುಮಕೂರಿನಲ್ಲಿ ಮಾತನಾಡಿದ ಅವರು, ಸಚಿವ ಎಂ.ಬಿ.ಪಾಟೀಲ್ ವಿರುದ್ದ ಮತ್ತೆ ಹರಿಹಾಯ್ದಿದ್ದಾರೆ. ಎಂ.ಬಿ ಪಾಟೀಲ್‌ಗೆ ನೇರವಾಗಿ ಕೇಳಲು ಬಯಸುತ್ತೇನೆ, ಕಾಮಗಾರಿ ಗುತ್ತಿಗೆ ನೀಡಿರುವುದರಲ್ಲಿ ಅವ್ಯವಹಾರ ನಡೆದಿರುವುದು ಸತ್ಯ. ನಾನು ಕೊಟ್ಟಿರುವ ದಾಖಲೆಗಳಲ್ಲಿ ಸಣ್ಣಪುಟ್ಟ ಲೋಪದೋಷಗಳಿದ್ದರೆ ಅವರು ಹೇಳಿದಂತೆ ಕೇಳಲು ನಾನು ಸಿದ್ಧನಿದ್ದೇನೆ ಎಂದು ಬಿ.ಎಸ್.ವೈ ಸವಾಲು ಹಾಕಿದರು.
ಹೊರರಾಜ್ಯದಿಂದ ಫೇಕ್ ಸರ್ಟಿಫಿಕೇಟ್ ಗಳನ್ನು ತಂದು ಕಾಮಗಾರಿ ಮಾಡಿದ್ದೇನೆ ಎಂದು ಏಜೆನ್ಸಿಯವರು ಅಪ್ಲೈ ಮಾಡಿದ್ದರು. ಅದಕ್ಕೆ ಅನುಮತಿ ನೀಡಲಾಗಿತ್ತು. ನಾವು ಅದಕ್ಕೆ ಆಕ್ಷೇಪ ಮಾಡಿದ ಮೇಲೆ ಎರಡು ದಿನಗಳ ಹಿಂದೆ ವಿತ್ ಡ್ರಾ ಮಾಡಿದ್ದೇವೆ ಎಂದು ಹೇಳಿದ್ದಾರೆ. 25 ಕೋಟಿ ಕಮಿಷನ್ ಹೊಡೆದು ಕಾಮಗಾರಿ ಕೊಟ್ಟಿದ್ದಾರೆ ಎಂದು ಆರೋಪವನ್ನು ಪುನರುಚ್ಛರಿಸಿದರು. ಹೊರಗಡೆಯಿಂದ ಇಬ್ಬರನ್ನು ಕರೆದು ಇಷ್ಟು ದೊಡ್ಡ ಕಾಮಗಾರಿ ಕೊಟ್ಟಿರುವ ಉದ್ದೇಶವೇನು? ಎಂದು ಖಾರವಾಗಿ ಪ್ರಶ್ನಿಸಿದರು.
ಇದು ಅಕ್ಷಮ್ಯ ಅಪರಾಧವಾಗಿದ್ದು, ಕಮಿಷನ್ ತೆಗೆದುಕೊಂಡ ಮೇಲೆ ವರ್ಕ್ ಕೊಡಲಾಗಿತ್ತು, ಈಗ ದೊಂಬರಾಟ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು. ಈಗ ನನ್ನ ವಿರುದ್ದ ಅವಾಚ್ಯ ಪದ ಬಳಸಿ ಮಾತನಾಡುತ್ತಿರುವುದು ಅವರ ಯೋಗ್ಯತೆ ತಿಳಿಸುತ್ತದೆ ಎಂದರು.