ಗೋಕಾಕ್ ಪ್ರತ್ಯೇಕ ಜಿಲ್ಲೆಯಾಗಬೇಕೆಂದ ಅನರ್ಹ ಶಾಸಕ ರಮೇಶ್ ಜಾರಕಿಹೊಳಿ
ಮಂಗಳವಾರ, 15 ಅಕ್ಟೋಬರ್ 2019 (11:59 IST)
ಬೆಳಗಾವಿ : ಬಳ್ಳಾರಿ, ಮೈಸೂರಿನ ವಿಭಜನೆಯಾಗಬೇಕೆಂಬ ಕೂಗಿನ ನಂತರ ಇದೀಗ ಗೋಕಾಕ್ ಪ್ರತ್ಯೇಕ ಜಿಲ್ಲೆಯಾಗಬೇಕೆಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಶಾಸಕ ಆನಂದ್ ಸಿಂಗ್ ಬಳ್ಳಾರಿ ಜಿಲ್ಲೆ ವಿಭಜನೆ ಮಾಡಿ ವಿಜಯನಗರವನ್ನು ಪ್ರತ್ಯೇಕ ಜಿಲ್ಲೆ ಮಾಡಬೇಕೆಂದು ಸಿಎಂ ಯಡಿಯೂರಪ್ಪ ಅವರ ಬಳಿ ಬೇಡಿಕೆ ಇಟ್ಟಿದ್ದು, ಇದಕ್ಕೆ ಸಿಎಂ ಅಸ್ತು ಎಂದಿದ್ದರು. ತದ ನಂತರ ಮತ್ತೊಬ್ಬ ಅನರ್ಹ ಶಾಸಕ ಹೆಚ್. ವಿಶ್ವನಾಥ್ ಅವರು ಮೈಸೂರು ವಿಭಜನೆಯಾಗಿ ಹುಣಸೂರನ್ನು ಪ್ರತ್ಯೇಕ ಜಿಲ್ಲೆ ಮಾಡಬೇಕೆಂದು ಸಿಎಂ ಬಳಿ ಮನವಿ ಮಾಡಿದ್ದಾರೆ. ಈ ಬಗ್ಗೆ ಬಾರೀ ಚರ್ಚೆ ನಡೆಯುತ್ತಿರುವಾಗಲೇ ಇದೀಗ ರಮೇಶ್ ಜಾರಕಿಹೊಳಿ ಗೋಕಾಕ್ ಪ್ರತ್ಯೇಕ ಜಿಲ್ಲೆಯಾಗಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಬೆಳಗಾವಿಯನ್ನು ಈಗಾಗಲೇ ವಿಭಜನೆ ಮಾಡಿ ಚಿಕ್ಕೋಡಿಯನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಲಾಗಿದೆ. ಆದರೆ ಇದೀಗ ರಮೇಶ್ ಜಾರಕಿಹೊಳಿ ಗೋಕಾಕ್ ನ್ನು ಜಿಲ್ಲೆಯನ್ನಾಗಿ ಮಾಡುವಂತೆ ಸಿಎಂ ಬಳಿ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಮೈತ್ರಿ ಸರ್ಕಾರ ಉರುಳಿಸಲು ಪ್ರಮುಖ ಕಾರಣರಾದ ರಮೇಶ್ ಜಾರಕಿಹೊಳಿ ಬೇಡಿಕೆಗೆ ಸಿಎಂ ಯಡಿಯೂರಪ್ಪ ಯಾವ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.