ಬೆಂಗಳೂರು: ಕರ್ನಾಟಕದಲ್ಲಿ ಸ್ಥಳೀಯ ಚುನಾವಣೆಗಳಲ್ಲಿ ಮತದಾನಕ್ಕೆ ಇವಿಎಂ ಬದಲು ಬ್ಯಾಲೆಟ್ ಪೇಪರ್ ಬಳಕೆಯನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸ್ವಾಗತಿಸಿದ್ದು ಇದು ರಾಹುಲ್ ಗಾಂಧಿಯವರ ಬಹುದಿನಗಳ ಬೇಡಿಕೆಯಾಗಿತ್ತು ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದ ಮುಖಂಡರು, ಲೋಕಸಭೆ ವಿರೋಧ ಪಕ್ಷದ ನಾಯಕರಾದ ರಾಹುಲ್ ಗಾಂಧಿಯವರು ಇವಿಎಂ ವಿವಾದದ ಕುರಿತು ಸ್ಪಷ್ಟವಾದ ನಿಲುವು ಹೊಂದಿದ್ದಾರೆ. ಅವರು ಇವಿಎಂಗಳ ಬದಲಿಗೆ ಬ್ಯಾಲೆಟ್ ಪೇಪರ್ ವ್ಯವಸ್ಥೆಯ ಮರುಸ್ಥಾಪನೆಗೆ ನಿರಂತರವಾಗಿ ಆಗ್ರಹಿಸಿದ್ದಾರೆ. ಪ್ರಜಾಪ್ರಭುತ್ವದ ಮೂಲ ತತ್ವವೇ ಜನರ ಅಭಿಪ್ರಾಯಗಳ ಪ್ರತಿಬಿಂಬ. ಇವಿಎಂ ಮೂಲಕ ವ್ಯಕ್ತವಾಗುವ ಮತದಾನದ ಬದಲು, ಬ್ಯಾಲೆಟ್ ಪೇಪರ್ ಬಳಕೆಯು ಪ್ರತಿ ಮತವೂ ನಿಷ್ಪಕ್ಷಪಾತವಾಗಿ ಎಣಿಕೆಯಾಗುತ್ತಿದೆ ಎಂಬ ಭರವಸೆಯನ್ನು ನೀಡುತ್ತದೆ. ಇದು ಮತದಾರರ ಹಕ್ಕುಗಳನ್ನು ಬಲಪಡಿಸುತ್ತದೆ ಎಂದು ರಣದೀಪ್ ಸುರ್ಜೇವಾಲ ಹೇಳಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಇವಿಎಂನ ವಿಶ್ವಾಸಾರ್ಹತೆಯ ಕುರಿತು ಹಲವು ಅನುಮಾನಗಳು ಮತ್ತು ಪ್ರಶ್ನೆಗಳು ರಾಜಕೀಯ ವಲಯಗಳಲ್ಲಿ ಹಾಗೂ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿವೆ. ಎಲೆಕ್ಟ್ರಾನಿಕ್ ಮತಯಂತ್ರಗಳಲ್ಲಿನ ತಾಂತ್ರಿಕ ದೋಷಗಳು, ಹ್ಯಾಕಿಂಗ್ ಸಾಧ್ಯತೆಗಳು ಮತ್ತು ಫಲಿತಾಂಶಗಳ ಕುರಿತು ವ್ಯಕ್ತವಾಗುತ್ತಿರುವ ಗೊಂದಲಗಳು ಮತದಾರರಲ್ಲಿ ವಿಶ್ವಾಸದ ಕೊರತೆಯನ್ನು ಸೃಷ್ಟಿಸಿವೆ. ನಮ್ಮ ಪ್ರಜಾಪ್ರಭುತ್ವದ ಹೃದಯ ಭಾಗವಾಗಿರುವ ಮತದಾನ ಪ್ರಕ್ರಿಯೆಯು ಸಂಪೂರ್ಣವಾಗಿ ಪಾರದರ್ಶಕ ಮತ್ತು ಎಲ್ಲರ ನಂಬಿಕೆಗೆ ಅರ್ಹವಾಗಿರಬೇಕು ಎಂದು ಅವರು ಹೇಳಿದ್ದಾರೆ.