ಕೇಂದ್ರ ಸರ್ಕಾರದಿಂದಾಗಿ ದಿನಬಳಕೆ ವಸ್ತುಗಳಿಗೂ ಇನ್ನು ಝಡ್ ಪ್ಲಸ್ ಭದ್ರತೆ ಕೊಡಬೇಕು

Krishnaveni K

ಮಂಗಳವಾರ, 1 ಜುಲೈ 2025 (16:26 IST)
ಬೆಂಗಳೂರು: ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯಿಂದಾಗಿ ಗ್ಯಾಸ್ ಸಿಲಿಂಡರ್ ಸೇರಿದಂತೆ ದಿನಬಳಕೆಯ ವಸ್ತುಗಳಿಗೆ ಕೆಲವೇ ದಿನಗಳಲ್ಲಿ ʼಝಡ್ ಪ್ಲಸ್ʼ ಸೆಕ್ಯೂರಿಟಿ ನೀಡಬೇಕಾದ ಪರಿಸ್ಥಿತಿ ಎದುರಾಗಲಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಟೀಕೆ ಮಾಡಿದ್ದಾರೆ.

ಇಂದು ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ‘ಹೆದ್ದಾರಿಗಳ ಟೋಲ್ ನಿಂದ ರೈಲ್ವೇ ತನಕ, ಅಡುಗೆ ಸಿಲಿಂಡರ್ ನಿಂದ ದಿನಬಳಕೆ ವಸ್ತುಗಳ ಬೆಲೆ ಏರಿಕೆ ಮಾಡಿ ದೇಶದ ಜನಸಾಮಾನ್ಯನ ಪರಿಸ್ಥಿತಿಯನ್ನು ಜರ್ಜರಿತಗೊಳಿಸಿದೆ. ಮೋದಿ ಹಾಗೂ ಬಿಜೆಪಿ ಜನಸಾಮಾನ್ಯರ ಜೇಬಿಗೆ ಕೈ ಹಾಕಿ ದಾಳಿ ಮಾಡಿದೆ. ಇದು ಒಂದು ರೀತಿಯ ಕ್ರೂರ ನೀತಿ’ ಎಂದಿದ್ದಾರೆ.

‘ಮೋದಿಯವರೇ ಇದು ಆಡಳಿತ ನಡೆಸುವ ಮಾದರಿಯಲ್ಲ ಬದಲಾಗಿ ಹೆದ್ದಾರಿಗಳ್ಳತನ. ರೈಲ್ವೇ ಹಳಿಗಳ, ಹೆದ್ದಾರಿಗಳ ಮೂಲಕ ನಡೆಸುತ್ತಿರುವ ದರೋಡೆ. ಸಾರ್ವಜನಿಕವಾಗಿ ಜನರನ್ನು ಪಿಕ್ ಪಾಕೆಟ್ ಮಾಡುವ ಷಡ್ಯಂತ್ರ. ಭಾರತೀಯ ಜೇಬ್ ಕಾಟೋ ಪಾರ್ಟಿ (ಭಾರತೀಯ ಜನರ ಜೇಬು ಕತ್ತರಿಸುವ ಪಕ್ಷ) ಎಂದು ಬಿಜೆಪಿಯನ್ನು ವ್ಯಾಖ್ಯಾನಿಸಬಹುದು. ಕೂಡಲೇ ಬಿಜೆಪಿಯು ರೈಲ್ವೇ ಬೆಲೆ ಏರಿಕೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಕಾಂಗ್ರೆಸ್ ಪಕ್ಷ ಆಗ್ರಹಿಸುತ್ತದೆ’ ಎಂದರು.

ಬೆಲೆ ಏರಿಕೆ ಬಗ್ಗೆ ಟೀಕಿಸಿದ ಅವರು ‘ಜುಲೈ 1 ರಿಂದ ರೈಲ್ವೇ ದರಗಳನ್ನು ಹೆಚ್ಚಳ ಮಾಡಿ ಸುಮಾರು 700 ಕೋಟಿಯಷ್ಟು ಹೊರೆಯನ್ನು ಜನರ ಮೇಲೆ ಹಾಕಲಾಗುತ್ತಿದೆ. ಏಪ್ರಿಲ್ 1 ರಂದು ಟೋಲ್ ಬೆಲೆ ಏರಿಕೆಯ ಕೊಡುಗೆ ನೀಡಿತ್ತು. ಈಗ ರೈಲ್ವೇ ಬೆಲೆ ಏರಿಕೆ ಮಾಡಿ ಹೊಸ ಕೊಡುಗೆ ನೀಡಿದೆ. ಈಗ ಬೆಂಗಳೂರು ಎಲೆವೇಟೆಡ್ ಕಾರಿಡಾರ್ ಟೋಲ್ ಬೆಲೆಯನ್ನು ಹೆಚ್ಚಳ ಮಾಡಿ ಬರೆ ಹಾಕಿದೆ’ ಎಂದಿದ್ದಾರೆ.

ಬುಲೆಟ್ ಟ್ರೈನ್ ನೀಡುತ್ತೇವೆ ಎಂದು ರೈಲುಗಳನ್ನೇ ಮಾಯ ಮಾಡಿದ್ದಾರೆ. ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ. ರೈಲಿನಲ್ಲಿ ಜಾಗ ಸಿಗದೆ ನೇತಾಡುತ್ತಿದ್ದ ಪ್ರಯಾಣಿಕರು ರೈಲಿನಿಂದ ಬಿದ್ದು ಮಹಾರಾಷ್ಟ್ರದಲ್ಲಿ ಪ್ರಾಣ ಕಳೆದುಕೊಂಡರು.

ರಾಜ್ಯದಲ್ಲಿ ನೀಡುತ್ತಿರುವ ಗ್ಯಾರಂಟಿಗನ್ನೂ ಸಹ ಬಿಜೆಪಿ ವಿರೋಧ ಮಾಡುತ್ತಲೇ ಬಂದಿದೆ. ಕುಟುಂಬದ ಸದಸ್ಯನಿಗೆ ತಲಾ 10  ಕೆಜಿ ಅಕ್ಕಿ ನೀಡಲಾಗುತ್ತಿದೆ. ಇದೇ ರೀತಿ ಐದು ಗ್ಯಾರಂಟಿಗನ್ನು ನೀಡುತ್ತಿದ್ದೇವೆ. ಯಾವುದೇ ತರಹದ ಕೊಡುಗೆ ಜನರನ್ನು ನೀಡುವುದು ಬಿಜೆಪಿ ಒಪ್ಪುವುದಿಲ್ಲ ಎಂದು ಟೀಕಾ ಪ್ರಹಾರ ಮಾಡಿದರು.

ಯಾವುದೇ ಸದ್ದು ಗದ್ದಲವಿಲ್ಲದೇ ನಿಧಾನವಾಗಿ ಟೋಲ್ ಹಾಗೂ ರೈಲ್ವೇ ಪ್ರಯಾಣ ದರ ಹೆಚ್ಚಳ ಮಾಡುತ್ತಲೇ ಇದ್ದಾರೆ. ಜನಸಾಮಾನ್ಯರ ಕತ್ತು ಹಿಸುಕುತ್ತಿದ್ದಾರೆ. ಇದೊಂದೆ ಅನಾಹುತ ಮಾಡಿಲ್ಲ. ಗ್ಯಾಸ್ ಸಿಲಿಂಡರ್, ತರಕಾರಿ, ದಿನಸಿ ಬೆಲೆ ತಾರಕ್ಕೇರಿದೆ. ಮಧ್ಯಮವರ್ಗ ಸೇರಿದಂತೆ ಸಮಾಜದ ಎಲ್ಲಾ ಸ್ತರದ ಜನರು ಇದರಿಂದ ತತ್ತರಿಸಿ ಹೋಗಿದ್ದಾರೆ.

ಅಚ್ಚೇದಿನ್ ರೈಲುಗಳ ಮಂಗಮಾಯದ ಮೂಲಕ ಪ್ರಾರಂಭವಾಗಿದೆ. ವಿಕಾಸದಿಂದ ವಿನಾಶದ ಕಡೆಗೆ ದೇಶ ಹೆಜ್ಜೆ ಹಾಕುತ್ತಿದೆ. 2024 ರ 1ನೇ ಏಪ್ರಿಲ್ ನಿಂದ 31 ರ 2025 ವರೆಗಿನ ರೈಲ್ವೇ ಪ್ರಯಾಣಿಕರ ಅಂಕಿಅಂಶಗಳನ್ನು ತೆಗೆದುಕೊಂಡರೆ 715 ಕೋಟಿ ಪ್ರಯಾಣ ಒಂದು ವರ್ಷದಲ್ಲಿ ದಾಖಲಾಗಿದೆ. 2023-24 ರಲ್ಲಿ ಸೌತ್ ವೆಸ್ಟರ್ನ್ ರೈಲ್ವೇಯ ಪ್ರಯಾಣಿಕರ ಸಂಖ್ಯೆ 2 ಕೋಟಿ 48 ಲಕ್ಷ ಜನರು ಪ್ರಯಾಣ ಮಾಡಿದ್ದಾರೆ. 2023- 24ರ ಸಾಲಿನಲ್ಲಿ 2.56 ಲಕ್ಷ ಕೋಟಿ ವಹಿವಾಟು ನಡೆಸಿದ್ದು 3 ಸಾವಿರ ಕೋಟಿ ನಿವ್ವಳ ಲಾಭ ಮಾಡಿದೆ. ರೈಲ್ವೇ ಅಪಘಾತದಿಂದ 2 ಲಕ್ಷ 60 ಸಾವಿರ ಜನರು ದೇಶದಲ್ಲಿ ಸತ್ತಿದ್ದಾರೆ. ಹಿರಿಯ ನಾಗರೀಕರಿಗೆ ರೈಲ್ವೇ ರಿಯಾಯಿತಿ ಕಿತ್ತುಕೊಳ್ಳಲಾಗಿದೆ. ಬ್ಲಾಂಕೆಟ್ ನೀಡುವುದಕ್ಕೆ ಹೆಚ್ಚುವರಿ ಹಣ ನೀಡಬೇಕಾಗಿದೆ ಎಂದು ಅಂಕಿ ಅಂಶ ನೀಡಿದ್ದಾರೆ.

ಕಳೆದ  10 ವರ್ಷಗಳಲ್ಲಿ ಶೇ 100 ರಷ್ಟು ಟಿಕೆಟ್ ದರವನ್ನು ಕೇಂದ್ರ ಸರ್ಕಾರ ಏರಿಕೆ ಮಾಡಿತ್ತು. ಕಳೆದ 2014 ರಲ್ಲಿ ಇಡೀ ದೇಶದ ವಾರ್ಷಿಕ ಟೋಲ್ ಸಂಗ್ರಹ 17,700,59 ಕೋಟಿ. ಆದರೆ ಈಗ 85 ಸಾವಿರ ಕೋಟಿ ಇಷ್ಟು ಹಣವನ್ನು ಲೂಟಿ ಮಾಡಲಾಗುತ್ತಿದೆ. ಇದನ್ನೇ ಬಿಜೆಪಿ ದೇಶದ ಜನರಿಗೆ ನೀಡಿರುವ ಕೊಡುಗೆ. ಶೇ 500 ರಷ್ಟು ಬೆಲೆ ಹೆಚ್ಚಳ. ಕರ್ನಾಟಕದ ಜನರಿಂದ ಕಳೆದ ಐದು ವರ್ಷಗಳಲ್ಲಿ 10 ಸಾವಿರ ಕೋಟಿಯನ್ನು ಟೋಲ್ ಮೂಲಕವೇ ಸಂಗ್ರಹ ಮಾಡಿದೆ. 2024 ರಲ್ಲಿ 4.86 ಸಾವಿರ ಕೋಟಿ ಟೋಲ್ ಅನ್ನು ಕರ್ನಾಟಕದ ಜನ ತೆತ್ತಿದ್ದಾರೆ. ಹೊಸೂರು ಟೋಲ್ ಪ್ಲಾಜಾದಲ್ಲಿ ಮತ್ತೆ ಕೇಂದ್ರ ಸರ್ಕಾರ ಟೋಲ್ ಬೆಲೆ ಹೆಚ್ಚಳ ಮಾಡಿದೆ ಎಂದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ