ಬೆಂಗಳೂರು: ನಟಿ ರನ್ಯಾ ರಾವ್ ಭಾಗಿಯಾಗಿರುವ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ರಾಜಕೀಯ ನಂಟಿನ ಕುರಿತು ತೀವ್ರ ಚರ್ಚೆಯಾಗುತ್ತಿದೆ. ಸಚಿವರಿಬ್ಬರು ಭಾಗಿಯಾಗಿರುವ ಬಗ್ಗೆ ರಾಜ್ಯದಲ್ಲಿ ಹೊಸ ಸಂಚಲನ ಮೂಡಿದೆ.
ಈ ಬೆಳವಣಿಗೆ ಬೆನ್ನಲ್ಲೇ ಮಂಗಳವಾರ ವಿಧಾನಸಭೆಯ ಕಲಾಪದಲ್ಲಿ ಭಾಗವಹಿಸಿದ್ದ ಗೃಹ ಸಚಿವ ಜಿ. ಪರಮೇಶ್ವರ ಅವರನ್ನು ತುರ್ತಾಗಿ ತಮ್ಮ ಕಚೇರಿಗೆ ಕರೆಸಿಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ನಟಿ ರನ್ಯಾ ರಾವ್ ಭಾಗಿಯಾಗಿರುವ ಚಿನ್ನ ಕಳ್ಳಸಾಗಣೆ ಪ್ರಕರಣದ ಮಾಹಿತಿಯನ್ನು ಪಡೆದುಕೊಂಡರು.
ಇಂದು ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪ ನಡೆಯುತ್ತಿದ್ದ ವೇಳೆ ಗೃಹ ಸಚಿವರಿಗೆ ಬುಲಾವ್ ನೀಡಲಾಗಿದೆ. ವಿಧಾನಸಭೆಯ ಮೊಗಸಾಲೆಯಲ್ಲಿರುವ ತಮ್ಮ ಕಚೇರಿಗೆ ತುರ್ತಾಗಿ ಬರುವಂತೆ ಪರಮೇಶ್ವರ ಅವರಿಗೆ ಸಿಎಂ ಆಹ್ವಾನ ನೀಡಿದ್ದರು. ನಂತರ ಈ ಇಬ್ಬರು ನಾಯಕರು 10 ನಿಮಿಷಗಳ ಕಾಲ ಪ್ರಕರಣದ ಬಗ್ಗೆ ಚರ್ಚೆ ನಡೆಸಿದರು.
ರನ್ಯಾ ರಾವ್ ಭಾಗಿಯಾಗಿರುವ ಚಿನ್ನ ಕಳ್ಳಸಾಗಣೆ ಪ್ರಕರಣದದಲ್ಲಿ ರಾಜಕೀಯ ನಂಟ, ಪ್ರೊಟೊಕಾಲ್ ಉಲ್ಲಂಘನೆ ಬಗ್ಗೆ ರಾಜ್ಯ ಸರ್ಕಾರದ ಹಂತದಲ್ಲಿ ಆಗಿರಬಹುದಾದ ಲೋಪಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಸಚಿವರಿಂದ ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ.