ಬೆಂಗಳೂರು: ದುಬೈನಿಂದ ಚಿನ್ನ ಕಳ್ಳಸಾಗಣಿಕೆ ಮಾಡಲು ತನಗೆ ಚಿನ್ನ ತಂದುಕೊಟ್ಟವರು ಯಾರು ಎಂದು ನಟಿ ರನ್ಯಾ ರಾವ್ ಕೊನೆಗೂ ಬಾಯ್ಬಿಟ್ಟಿದ್ದಾಳೆ.
ಡಿಆರ್ ಐ ಅಧಿಕಾರಿಗಳ ತನಿಖೆ ವೇಳೆ ನಟಿ ರನ್ಯಾ ರಾವ್ ತನಗೆ ಚಿನ್ನ ತಂದುಕೊಟ್ಟವರು ಯಾರು, ಆತನ ಬಗ್ಗೆ ಮಾಹಿತಿ ನೀಡಿದವರು ಯಾರು ಎಂದು ಎಳೆ ಎಳೆಯಾಗಿ ವಿವರಿಸಿದ್ದಾಳೆ. ಅದರಂತೆ ದುಬೈನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ತನಗೆ ವ್ಯಕ್ತಿಯೊಬ್ಬ ಚಿನ್ನ ನೀಡಿದ್ದ ಎಂದಿದ್ದಾಳೆ.
ವಿಮಾನ ನಿಲ್ದಾಣದ ಗೇಟ್ ಎ ಡೈನಿಂಗ್ ಲಾಂಜ್ ನಲ್ಲಿ ಒಬ್ಬ ವ್ಯಕ್ತಿಯಿರುತ್ತಾನೆ. ಆತನನ್ನು ಭೇಟಿ ಮಾಡಿ ಚಿನ್ನ ಪಡೆದುಕೊಳ್ಳುವಂತೆ ಇಂಟರ್ನೆಟ್ ಕಾಲ್ ನಲ್ಲಿ ವ್ಯಕ್ತಿಯೊಬ್ಬರು ಹೇಳುತ್ತಾರೆ. ಅದರಂತೆ ನಾನು ಆ ವ್ಯಕ್ತಿಯನ್ನು ಭೇಟಿ ಮಾಡುತ್ತೇನೆ.
ಅರಬ್ ಶೈಲಿಯ ಬಟ್ಟೆ ತೊಟ್ಟುಕೊಂಡಿದ್ದ ವ್ಯಕ್ತಿಯನ್ನು ಭೇಟಿ ಮಾಡುತ್ತೇನೆ. ಆತ ಆಫ್ರಿಕಾ-ಅಮೆರಿಕನ್ ಆಕ್ಸೆಂಟ್ ನಲ್ಲಿ ಇಂಗ್ಲಿಷ್ ಮಾತನಾಡುತ್ತಿದ್ದ. ಆತ ಸುಮಾರು ಆರು ಫೀಟ್ ಉದ್ದ ಇದ್ದ ಮತ್ತು ನೋಡಲು ಸ್ಪುರದ್ರೂಪಿಯಾಗಿದ್ದ ಎಂದು ರನ್ಯಾ ಹೇಳಿದ್ದಾಳೆ.
ಆತ ತನಗೆ ಟಾರ್ಪೊಲಿನ್ ಪ್ಲಾಸ್ಟಿಕ್ ನಲ್ಲಿ ಕವರ್ ಮಾಡಿದ್ದ ಚಿನ್ನ ನೀಡಿದ್ದ. ಇದೇ ಮೊದಲ ಬಾರಿಗೆ ನಾನು ಚಿನ್ನ ಸಾಗಿಸಿದ್ದು. ವಿಮಾನ ನಿಲ್ದಾಣಕ್ಕೆ ಬರುವ ಮೊದಲೇ ಟೇಪ್ ಗಳನ್ನು ರೆಡಿ ಮಾಡಿಕೊಂಡು ಬಂದಿದ್ದೆ. ಅದರಂತೆ ಚಿನ್ನವನ್ನು ಅದರಲ್ಲಿ ಟೇಪ್ ಮಾಡಿ ಮೈಗೆ ಸುತ್ತಿಕೊಂಡಿದ್ದಾಗಿ ರನ್ಯಾ ಬಾಯ್ಬಿಟ್ಟಿದ್ದಾಳೆ.