ರಮಣರಾವ್ ವಿರುದ್ಧ ದಾಖಲಾದ ಎರೆಡರಡು ದೂರು ಗಳ ಪರಿಶೀಲನೆ

ಶನಿವಾರ, 6 ನವೆಂಬರ್ 2021 (20:42 IST)
ಬೆಂಗಳೂರು:  ನಟ ಪುನೀತ್ ರಾಜ್‌ಕುಮಾರ್‌ ಚಿಕಿತ್ಸೆ ನೀಡಿರುವ ವೈದ್ಯ ಡಾ.ರಮಣರಾವ್ ಅವರ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಗೆ ನೀಡಿರುವ ಎರಡು ದೂರುಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ದೂರುಗಳ ಬಗ್ಗೆ ಇಂದು ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
 
ಪುನೀತ್ ರಾಜ್‌ಕುಮಾರ್‌ ಅಕಾಲಿಕ ಸಾವು ಸಂಭವಿಸಲು ವೈದ್ಯ ರಮಣ್‌ರಾವ್ ಅವರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಕುರುಬರಹಳ್ಳಿಯ ಅರುಣ್ ಪರಮೇಶ್ವರ್ ಎನ್ನುವವರು ಸದಾಶಿವನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
 
ಡಾ ರಮಣ್‌ರಾವ್ ತಮ್ಮ ಕ್ಲಿನಿಕ್‌ನಲ್ಲಿ ಪುನೀತ್ ಯಾವ ರೀತಿ ಆರೋಗ್ಯ ತಪಾಸಣೆ ನಡೆಸಿದರು. ವಿಕ್ರಂ ಆಸತ್ರೆಗೆ ಹೋಗಲು ಏಕೆ ತಡವಾಯಿತು, ಈ ಬಗ್ಗೆ ಅನುಮಾನ ವ್ಯಕ್ತವಾಗಿದೆ ಎಂದು ದೂರಿನಲ್ಲಿ ಅರುಣ್ ಶಂಕಿಸಿದ್ದರು.
 
ವೈದ್ಯರನ್ನು ಬಂಧಿಸಿ: 
 
ಪುನೀತ್ ರಾಜ್‌ಕುಮಾರ್  ಸಾವಿನ ಕುರಿತು ವೈದ್ಯ ಡಾ.ರಮಣರಾವ್ ಮೇಲೆ ಅನುಮಾನವಿದೆ. ಈ ಕೂಡಲೇ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕಿದೆ ಎಂದು ಡಾ.ರಾಜ್‌ಕುಮಾರ್ ಸೇನೆಯ ಅಧ್ಯಕ್ಷ ವಿ.ತ್ಯಾಗರಾಜ್ ಎನ್ನುವವರು ಸದಾಶಿವನಗರ ಪೊಲೀಸ್ ಠಾಣೆಗೆ ಪತ್ರ ನೀಡಿದ್ದಾರೆ. 
 
 
ಅ 29 ರಂದು ಪುನೀತ್ ರಾಜ್‌ಕುಮಾರ್ ಚಿಕೆತ್ಸೆಗೆಂದು ರಮಣರಾವ್ ಅವರ ಕ್ಲಿನಿಕ್‌ಗೆ ಹೋಗಿದ್ದರು. ಆದರೆ  ಬೇಜವಾಬ್ದಾರಿಯಿಂದ ಸೂಕ್ತ ಸಮಯದಲ್ಲಿ ಸೂಕ್ತ ವಾಗಿ ಸ್ಪಂದಿಸಿಲ್ಲ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಅಂದು ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿದ ತಕ್ಷಣ ಸಮೀಪದ ಆಸ್ಪತ್ರೆಗೆ ಹೋಗಲು ಸಲಹೆ ಮಾಡದೆ ತಮ್ಮ ಮಗ ಕೆಲಸ ಮಾಡುತ್ತಿರುವ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಸೂಚಿಸಿದ್ದಾರೆ.
 
ಅಲ್ಲದೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡದೆ ಸಮಯ ವ್ಯರ್ಥ ಮಾಡಿ ಅಮೂಲ್ಯವಾದ ರತ್ನವನ್ನು ಕಳೆದುಕೊಳ್ಳಲು ಕಾರಣರಾದ ಡಾ.ರಮಣರಾವ್‌ ಅವರನ್ನು ಬಂಧಿಸಬೇಕೆಂದು ದೂರಿನಲ್ಲಿ ತ್ಯಾಗರಾಜ್ ಶುಕ್ರವಾರ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ