ರೈತರ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಬೊಮ್ಮಾಯಿ ಬಂಪರ್ ಕೊಡುಗೆ ಘೋಷಣೆ
ಬುಧವಾರ, 28 ಜುಲೈ 2021 (14:19 IST)
ದಕ್ಷ, ಪ್ರಮಾಣಿಕ ಹಾಗೂ ಜನಪರ ಆಡಳಿತ ನೀಡುವ ಉದ್ದೇಶ ಹೊಂದಿದ್ದು, ಕೇವಲ ಆದೇಶ ನೀಡುವುದಲ್ಲ. ಅನುಷ್ಠಾನದ ಕಡೆ ಗಮನ ಹರಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ನಂತರ ಬೆಂಗಳೂರಿನ ವಿಧಾನಸೌಧದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ನಂತರ ಮೊದಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಯೋಜನೆ ತಲುಪಬೇಕು. ಕೇವಲ ಆದೇಶ ಘೋಷಣೆಗಳ ಮೂಲಕ ಸರಕಾರ ಭರವಸೆ ನೀಡುವುದಿಲ್ಲ. ಆದೇಶಗಳ ಅನುಷ್ಠಾನದಿಂದ ಯೋಜನೆಗಳನ್ನು ಜಾರಿಗೆ ತರಬೇಕು ಎಂದರು.
ನಡೆಯುತ್ತೆ ಬಿಡಿ ಎಂಬ ಮನೋಭಾವ ಬಿಟ್ಟುಬಿಡಿ. ಆಡಳಿತದಲ್ಲಿ ಶಿಸ್ತು ತರುವ ಅಗತ್ಯವಿದೆ. ಆದ್ದರಿಂದ ಅನಗತ್ಯ ಖರ್ಚುಗಳಿಗೆ ಕಡಿವಾಣಕ್ಕೆ ಸೂಚನೆ ನೀಡಿದ್ದು, ಮಾರ್ಚ್ 31ರೊಳಗೆ ಶೇ.5ರಷ್ಟು ಖರ್ಚು ಖಡಿತಕ್ಕೆ ಸೂಚಿಸಿದ್ದೇನೆ. ಅಧಿಕಾರಿಗಳು ಕೂಡ ಸಲಹೆ ನೀಡಲು ಪೂರ್ಣ ಸ್ವತಂತ್ರರಿದ್ದಾರೆ ಎಂದು ಅವರು ಹೇಳಿದರು.
ಯಾವುದೇ ಕಡತ ಆದರೂ 15 ದಿನದಲ್ಲಿ ವಿಲೇವಾರಿ ಆಗಬೇಕು. ರೈತರ ಮಕ್ಕಳ ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡಲಾಗುವುದು. ರೈತರ ಮಕ್ಕಳಿಗೆ 1 ಸಾವಿರ ಕೋಟಿ ರೂ. ಹೆಚ್ಚುವರಿ ಅನುದಾನ ಮೀಸಲಿಡುವುದಾಗಿ ಅವರು ಘೋಷಿಸಿದರು.