ಬಜೆಟ್ ನಲ್ಲಿ ಮಹಿಳೆಯರಿಗೆ ರೂ.66,694 ಕೊಟಿ ಅನುದಾನ

ಶನಿವಾರ, 21 ಜನವರಿ 2017 (14:00 IST)
ರಾಜ್ಯದಲ್ಲಿ ಮಹಿಳಾ ಉದ್ದೇಶಿತ ಆಯವ್ಯಯದಲ್ಲಿ 2016-17ನೇ ಸಾಲಿಗೆ 66,694 ಕೋಟಿ ರೂ. ಅನುದಾನ ನಿಗದಿ ಪಡಿಸಲಾಗಿದ್ದು, ವೆಚ್ಚವಾಗಿರುವ ಅನುದಾನದ ಬಗ್ಗೆ ಮಾರ್ಚ್ ಅಂತ್ಯದ ವೇಳೆಗೆ ಸ್ಪಷ್ಟ ಮಾಹಿತಿ ದೊರೆಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ಅವರು ತಿಳಿಸಿದರು.
 
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಹಿಳಾ ಉದ್ದೇಶಿತ ಆಯವ್ಯಯದ ಅನುಷ್ಠಾನದ ಕುರಿತು ಪ್ರಗತಿ ಪರಿಶೀಲನೆ ನಡೆಸಿದ ನಂತರ ಪತ್ರಕರ್ತರಿಗೆ ಈ ಮಾಹಿತಿ ನೀಡಿದರು. ಗ್ರಾಮೀಣ ಪ್ರದೇಶದಲ್ಲಿ 14 ಲಕ್ಷ ಮಹಿಳೆಯರು ಪಹಣಿ ಹೊಂದಿದ್ದಾರೆ. ಅಂತೆಯೇ ನಗರ ಪ್ರದೇಶಗಳಲ್ಲಿ ಮಹಿಳೆಯರಿಗೆ ಪಹಣಿ ವಿತರಿಸುವ ಗುರಿ ಇದೆ ಎಂದು ಅವರು ಮಾಹಿತಿ ನೀಡಿದರು.
 
ಮೀನುಗಾರಿಕಾ ಇಲಾಖೆಯಲ್ಲಿ ಮಹಿಳಾ ಸ್ವಸಹಾಯ ಗುಂಪುಗಳನ್ನು ಹೆಚ್ಚಿಸಲು ಸೂಚಿಸಲಾಗಿದೆ. ರೈತರ ಆತ್ಮಹತ್ಯೆ ಕುರಿತಂತೆ ಜಿಲ್ಲೆಗಳಿಂದ ಮಾಹಿತಿ ಪಡೆಯಲಾಗುತ್ತಿದೆ ಎಂದು ಅವರು ತಿಳಿಸಿದರು. ಸಭೆಗೆ ಮಾಹಿತಿ ನೀಡದ ಹಾಗೂ ಅಪೂರ್ಣ ಮಾಹಿತಿ ನೀಡಿದ ಇಲಾಖೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಶಿಫಾರಸು ಮಾಡಲಾಗುವುದು ಎಂದು ತಿಳಿಸಿದರು.
 
ಸಂತ್ರಸ್ಥರಿಗೆ ಮಾಶಾಸನ: ಆಸಿಡ್ ಸಂತ್ರಸ್ತೆಯರಿಗೆ ಮಹಿಳಾ ಆಯೋಗದಿಂದ ಮಾಸಿಕ 3 ಸಾವಿರ ರೂ.ಗಳ ಮಾಸಾಶನ ನೀಡಲಾಗುತ್ತಿದೆ. ಈ ವರೆಗೆ 189 ಸಂತ್ರಸ್ತೆಯರಲ್ಲಿ 12 ಮಂದಿ ಮಾತ್ರ ಈ ಸೌಲಭ್ಯ ಪಡೆಯುತ್ತಿದ್ದಾರೆ. ಉಳಿದವರಿಗೆ ಈ ಸೌಲಭ್ಯ ಪಡೆದುಕೊಳ್ಳುವಂತೆ ಮತ್ತೊಮ್ಮೆ ಪತ್ರ ಬರೆಯಲಾಗಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ