ಧರ್ಮಸ್ಥಳ: ರಾಜ್ಯಾದ್ಯಂತ ಸುದ್ದಿ ಮಾಡಿರುವ ಸೌಜನ್ಯ ಮನೆಗೆ ಇಂದು ಬಿಜೆಪಿ ನಾಯಕರು ಭೇಟಿ ನೀಡಲಿದ್ದಾರೆ. ಧರ್ಮಸ್ಥಳ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ ಭಾರೀ ಸದ್ದು ಮಾಡಿತ್ತು.
ಧರ್ಮಸ್ಥಳದಲ್ಲಿ ಈಗ ನಡೆಯುತ್ತಿರುವ ಪ್ರತಿಭಟನೆ, ಹೋರಾಟಗಳಿಗೆ ಮೂಲವೇ ಸೌಜನ್ಯ ಪ್ರಕರಣ ಎಂದರೂ ತಪ್ಪಾಗಲಾರದು. ಪಿಯುಸಿ ವಿದ್ಯಾರ್ಥಿನಿಯಾಗಿದ್ದ ಸೌಜನ್ಯ 12 ವರ್ಷಗಳ ಹಿಂದೆ ಅತ್ಯಾಚಾರಕ್ಕೀಡಾಗಿ, ಬರ್ಬರವಾಗಿ ಕೊಲೆಗೀಡಾಗಿದ್ದಳು. ಪ್ರಕರಣದಲ್ಲಿ ಆರೋಪಿಯೆಂದು ಬಂಧಿತನಾಗಿದ್ದ ಸಂತೋಷ್ ರಾವ್ ನಿರ್ದೋಷಿ ಎಂದು ಸಾಬೀತಾಗಿ ಬಿಡುಗಡೆಯಾಗಿದ್ದಾನೆ.
ಆದರೆ ಸೌಜನ್ಯ ಕುಟುಂಬ ಈಗಲೂ ಆರೋಪಿಗಳ ಪತ್ತೆಗಾಗಿ ಹೋರಾಟ ನಡೆಸುತ್ತಲೇ ಇದೆ. ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ನಾಯಕರು ಸೌಜನ್ಯ ಮನೆಗೆ ಭೇಟಿ ನೀಡಲಿದ್ದಾರೆ.
ಇಂದು ಧರ್ಮಸ್ಥಳ ಚಲೋ ಸಮಾವೇಶದಲ್ಲಿ ಭಾಗಿಯಾದ ಬಿಜೆಪಿ ನಾಯಕರು ಸೌಜನ್ಯ ಕುಟುಂಬಸ್ಥರನ್ನು ಭೇಟಿ ಮಾಡಲಿದ್ದಾರೆ. ಇಷ್ಟು ದಿನ ಬಿಜೆಪಿ ನಾಯಕರು ಯಾರೂ ಭೇಟಿ ನೀಡುತ್ತಿಲ್ಲ ಎಂದು ಸೌಜನ್ಯ ಪರ ಹೋರಾಟಗಾರರು ಆರೋಪಿಸುತ್ತಲೇ ಇದ್ದರು. ಇಂದು ಬಿಜೆಪಿ ನಾಯಕರು ಸೌಜನ್ಯ ಮನೆಗೆ ಭೇಟಿ ನೀಡುತ್ತಿರುವುದು ಕುತೂಹಲ ಮೂಡಿಸಿದೆ.