ಸಂಗೊಳ್ಳಿ ಗ್ರಾಮದ ಅಭಿವೃದ್ದಿಗೆ ರೂ.75ಲಕ್ಷ ಅನುದಾನ

ಸೋಮವಾರ, 30 ಜನವರಿ 2017 (15:04 IST)
ಸಂಗೊಳ್ಳಿ ರಾಯಣ್ಣನ ಹುಟ್ಟೂರಾದ ಸಂಗೊಳ್ಳಿ ಗ್ರಾಮದ ಅಭಿವೃದ್ಧಿಗೆ ಮಾರ್ಚ್ ಅಂತ್ಯದ ಒಳಗೆ ೭೫ ಲಕ್ಷ ರೂಪಾಯಿ ಬಿಡುಗಡೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದಾರೆ. ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಏರ್ಪಡಿಸಲಾದ ಸಂಗೊಳ್ಳಿ ರಾಯಣ್ಣ ಉತ್ಸವ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ಮಾತನಾಡಿದ್ದಾರೆ.
 
ರಾಯಣ್ಣ ಸ್ಮಾರಕ ಉದ್ಯಾನ ನಿರ್ಮಾಣ:  ರಾಯಣ್ಣನನ್ನು ನೇಣುಗಂಬಕ್ಕೇರಿಸಲಾದ ಖಾನಾಪುರ ತಾಲ್ಲೂಕಿನ ನಂದಗಡದಲ್ಲಿ ೧೨.೩೦ ಎಕರೆ ಜಾಗೆಯಲ್ಲಿ ಆಧುನಿಕ ತಂತ್ರಜ್ಜಾನದ ವಸ್ತುಸಂಗ್ರಹಾಲಯ ಸ್ಥಾಪನೆ ಮಾಡಲಾಗುವುದು ಮತ್ತು ನಂದಗಡದಲ್ಲಿ ರಾಯಣ್ಣ ಸ್ಮಾರಕ ಉದ್ಯಾನ ನಿರ್ಮಾಣ ಮಾಡಲಾಗುವದು ಎಂದು ಮುಖ್ಯಮಂತ್ರಿಗಳು ಹೇಳಿದರು.
 
 ರಾಯಣ್ಣ ಶೌರ್ಯ ಅಕಾಡೆಮಿ:   ಸಂಗೊಳ್ಳಿ ರಾಯಣ್ಣ ಬ್ರಿಟಿಷರಿಗೆ ಸೆರೆ ಸಿಕ್ಕ ಕೆರೆಯನ್ನು ಕೂಡ ಅಭಿವೃದ್ಧಿಪಡಿಸಲಾಗುವುದು. ಸಂಗೊಳ್ಳಿಯಲ್ಲಿ ನೂರು ಎಕರೆ ಜಾಗೆಯಲ್ಲಿ ಸೈನಿಕ ಶಾಲೆ ಮಾದರಿಯಲ್ಲಿ ಸಂಗೊಳ್ಳಿ ರಾಯಣ್ಣ ಶೌರ್ಯ ಅಕಾಡೆಮಿ ಸ್ಥಾಪನೆ ಮಾಡಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಣೆ ಮಾಡಿದರು.
 
ಯಾತ್ರಾ ಸ್ಥಳವಾಗಿ ಅಬಿವೃದ್ದಿ:   ದೇಶಪ್ರೇಮಕ್ಕೆ ಉದಾಹರಣೆಯಾಗಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹುಟ್ಟೂರು ಸಂಗೊಳ್ಳಿ ಹಾಗೂ ನೇಣುಗಂಬಕ್ಕೆ ಏರಿಸಿದ ನಂದಗಡವನ್ನು ಯಾತ್ರಾ ಸ್ಥಳವನ್ನಾಗಿ ಸರ್ಕಾರ ಅಭಿವೃದ್ಧಿಪಡಿಸಲಿದೆ.ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರ ಶಾಶ್ವತ ಪ್ರಾಧಿಕಾರ ಆಗಿದ್ದು, ಈ ಪ್ರಾಧಿಕಾರದ ವತಿಯಿಂದ ಸಂಗೊಳ್ಳಿ ಹಾಗೂ ನಂದಗಡ ಮಾತ್ರವಲ್ಲದೇ ಸುತ್ತಮುತ್ತಲಿನ ಗ್ರಾಮಗಳನ್ನು ಕೂಡ ಅಭಿವೃದ್ಧಿಪಡಿಸಲಾಗುವುದು ಮುಖ್ಯಮಂತ್ರಿಗಳು ತಿಳಿಸಿದರು.
 
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವರಾದ ಉಮಾಶ್ರೀ, ರೇಷ್ಮೆ ಮತ್ತು ಪಶುಸಂಗೋಪನೆ ಇಲಾಖೆಯ ಸಚಿವ ಎ.ಮಂಜು, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ವಿಧಾನಸಭೆ ಮುಖ್ಯ ಸಚೇತಕ ಅಶೋಕ ಪಟ್ಟಣ ಮತ್ತಿತರರು ಉಪಸ್ಥಿತರಿದ್ದರು. ಬೈಲಹೊಂಗಲ ಶಾಸಕ ವಿ.ಐ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ