ಸರಕಾರ ನಡೆಸಲು ಬಾರದ ಕಾಂಗ್ರೆಸ್ಸಿಗರು: ಗೋವಿಂದ ಕಾರಜೋಳ

Krishnaveni K

ಸೋಮವಾರ, 28 ಜುಲೈ 2025 (14:06 IST)
ದೆಹಲಿ: ಕಾಂಗ್ರೆಸ್ಸಿನವರಿಗೆ ಕರ್ನಾಟಕದಲ್ಲಿ ಸರಕಾರ ನಡೆಸಲು ಬರುತ್ತಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಮತ್ತು ಸಂಸದ ಗೋವಿಂದ ಕಾರಜೋಳ ಅವರು ಆರೋಪಿಸಿದ್ದಾರೆ.
 
ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಶ್ನೆಗೆ ಉತ್ತರಿಸಿದರು. ಮುಂಗಾರು ಹಂಗಾಮು ಪ್ರಾರಂಭಕ್ಕೆ ಮೊದಲೇ ನಾವು ಈ ಹಂಗಾಮಿನಲ್ಲಿ ರಾಜ್ಯದಲ್ಲಿ ಎಷ್ಟು ಹೆಕ್ಟೇರ್ ಬಿತ್ತನೆ ಮಾಡುತ್ತೇವೆ? ಯಾವ್ಯಾವ ಬೆಳೆ ಬಿತ್ತನೆ ಆಗಲಿದೆ? ಡಿಎಪಿ, ಯೂರಿಯಾ ಸೇರಿ ಎಷ್ಟು ಗೊಬ್ಬರ ಬೇಕಾಗಲಿದೆ?- ಇವೆಲ್ಲ ಮಾಹಿತಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವರು ಸಭೆಯ ಮೂಲಕ ಪಡೆಯಬೇಕಿತ್ತು. ಜನಪ್ರತಿನಿಧಿಗಳು, ಅಧಿಕಾರಿಗಳ ಸಭೆಯಲ್ಲಿ ಪಡೆದ ವಿವಿಧ ಜಿಲ್ಲೆಗಳ ಮಾಹಿತಿಯನ್ನು ಕ್ರೋಡೀಕರಿಸಿದ್ದರೆ ಸಮರ್ಪಕ ಲೆಕ್ಕಾಚಾರ ಸಿಗುತ್ತಿತ್ತು ಎಂದು ನುಡಿದರು.
 
ಮುಂಗಾರು ಹಂಗಾಮಿಗೆ ರಾಜ್ಯದಿಂದ ಸುಮಾರು 6.30 ಲಕ್ಷ ಟನ್ ಗೊಬ್ಬರದ ಪ್ರಸ್ತಾವನೆ ಕಳಿಸಿದ್ದು, ಕೇಂದ್ರವು 7.70 ಲಕ್ಷ ಟನ್ ಗೊಬ್ಬರವನ್ನು ಕೊಟ್ಟಿದೆ. ಬೇಡಿಕೆಗಿಂತ ಹೆಚ್ಚು ಕೊಟ್ಟಾಗ ಹಾಹಾಕಾರ ಏಕೆ? ಕಡಿಮೆ ಹೇಗಾಗಿದೆ? ಎಂದು ಕೇಳಿದರು. ಇದನ್ನು ಆಡಳಿತ ಮಾಡುವವರು ಆಲೋಚಿಸಬೇಕಿದೆ. ಗೊಬ್ಬರದ ಕಳ್ಳ ವ್ಯಾಪಾರಿಗಳು ಕೆಲವರಿದ್ದಾರೆ. ಅವರು ಮಾರುಕಟ್ಟೆಯಲ್ಲಿ ಗೊಬ್ಬರದ ಕೃತಕ ಅಭಾವ ಸೃಷ್ಟಿಸಿ, ಹೆಚ್ಚಿನ ಹಣಕ್ಕೆ ರೈತರಿಗೆ ಮಾರಾಟ ಮಾಡುತ್ತಿದ್ದಾರೆ ಎಂದು ದೂರಿದರು.
 
ನೀವು ಜಿಲ್ಲಾವಾರು ಬಳಕೆಯನ್ನು ನೋಡಿಲ್ಲ; ಮಂತ್ರಿಗಳು ಶೋಪೀಸ್‍ಗಳಲ್ಲ. ಜಿಲ್ಲೆಯಲ್ಲಿ ಜಿಲ್ಲಾ ಸಚಿವರೇ ಮುಖ್ಯಮಂತ್ರಿ ಇದ್ದಂತೆ. ಆ ರೀತಿ ಆಡಳಿತ ನಡೆಸದೇ ಇದ್ದರೆ ಜಿಲ್ಲಾ ಉಸ್ತುವಾರಿ ಸಚಿವರ ವ್ಯವಸ್ಥೆಯನ್ನು ಹಾಗೇ ಮುಂದುವರೆಸಬೇಕೇ ಅಥವಾ ರದ್ದು ಮಾಡಬೇಕೇ ಎಂದು ಸಿದ್ದರಾಮಯ್ಯನವರು ಯೋಚಿಸಲಿ ಎಂದು ಒತ್ತಾಯಿಸಿದರು.
 
ಈ ಸರಕಾರಕ್ಕೆ ದೀನದಲಿತರ ಬಗ್ಗೆ ಕಳಕಳಿ- ಕಾಳಜಿ ಇಲ್ಲ
ಗ್ಯಾರಂಟಿ ಯೋಜನೆಗಳಿಗೆ ಎಸ್‍ಸಿ, ಎಸ್‍ಟಿ ಸಮುದಾಯದ ಹಣ ಬಳಕೆ ಆಗಿದೆ ಎಂಬ ಕುರಿತು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದರು. ಈ ಸರಕಾರಕ್ಕೆ ದೀನದಲಿತರ ಬಗ್ಗೆ ಕಳಕಳಿ- ಕಾಳಜಿ ಇಲ್ಲ. ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‍ನಲ್ಲಿ ಅನುದಾನ ಕೊಟ್ಟಿದ್ದಾಗಿ ಸಿದ್ದರಾಮಯ್ಯನವರು ಬೆನ್ನು ಚಪ್ಪರಿಸಿಕೊಳ್ಳುತ್ತಾರೆ. ಸಾಮಾಜಿಕ- ಶೈಕ್ಷಣಿಕ, ಆರ್ಥಿಕವಾಗಿ ಸಾವಿರಾರು ವರ್ಷಗಳಿಂದ ತುಳಿತಕ್ಕೆ ಒಳಗಾದ ದೀನದಲಿತರು ಅದರಲ್ಲೂ ಅಸ್ಪøಶ್ಯ ಜನಾಂಗದವರನ್ನು ಮೇಲೆತ್ತಲು ವಿಶೇಷ ಅನುದಾನ ಕೊಡುವ ವ್ಯವಸ್ಥೆ ಇದೆ. ಆ ಅನುದಾನವನ್ನು ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ. ಎಸ್‍ಸಿ, ಎಸ್‍ಟಿ ಸಮುದಾಯಕ್ಕೆ ವಿಶೇಷ ಯೋಜನೆ ನೀಡಲು ಮತ್ತು ಅವರನ್ನು ಸಬಲರನ್ನಾಗಿ ಮಾಡಲು ಆ ಮೊತ್ತ ಬಳಕೆ ಆಗಬೇಕು ಎಂದು ಗೋವಿಂದ ಕಾರಜೋಳ ಅವರು ಆಗ್ರಹಿಸಿದರು.
 
ಕಾಂಗ್ರೆಸ್ ಪಕ್ಷ ಆಡಳಿತದಲ್ಲಿ ಇರುವ ಕಡೆಗಳಲ್ಲಿ ಇಂಥ ನಿಧಿಯ ದುರ್ಬಳಕೆ ಮಾಡುತ್ತಿದೆ. ಮತಬ್ಯಾಂಕ್ ರಾಜಕಾರಣ ಮಾಡುತ್ತಿದೆ. ವಿಶೇಷ ಯೋಜನೆಯ ಹಣ ಕದ್ದು, ಬಡವರ ಮನಸ್ಸನ್ನು ಕದ್ದು ಮತಬ್ಯಾಂಕ್ ರಾಜಕಾರಣ ಮಾಡುವ ಸಿದ್ದರಾಮಯ್ಯನವರಿಗೆ ಅಹಿಂದ ನಾಯಕ ಎಂದು ಹೇಳಿಕೊಳ್ಳಲು ಯಾವ ನೈತಿಕತೆಯೂ ಇಲ್ಲ ಎಂದು ಟೀಕಿಸಿದರು.
 
ಒಳ ಮೀಸಲಾತಿ- ತಪ್ಪು ದಾರಿಗೆ ಎಳೆಯುವ ಯತ್ನ
ಮುನಿಯಪ್ಪ ಅವರು ಕಾಂಗ್ರೆಸ್ಸಿನಲ್ಲಿ ಧ್ವನಿ ಇಲ್ಲದ ಹಿರಿಯ ವ್ಯಕ್ತಿ. ಕಾಂಗ್ರೆಸ್ಸಿನಲ್ಲಿ ಅವರನ್ನು ಯಾವೂರ ದಾಸಯ್ಯ ಎಂದು ಕೇಳುವವರಿಲ್ಲ. ಸುಮ್ಮನೆ ನಾನೂ ಇದ್ದೇನೆ ಎಂದು ತೋರಿಸಿಕೊಳ್ಳುವ ಸಲುವಾಗಿ ಅವರು ಒಳ ಮೀಸಲಾತಿ ವಿಚಾರದಲ್ಲಿ ಸಮಾಜವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ಈ ಕುರಿತ ಪ್ರಶ್ನೆಗೆ ಉತ್ತರ ಕೊಟ್ಟರು. 2013ರ ಚುನಾವಣೆಯಲ್ಲಿ ಇದೇ ಮಲ್ಲಿಕಾರ್ಜುನ ಖರ್ಗೆ, ಇದೇ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಮುನಿಯಪ್ಪ ಅವರು ಸೇರಿದಂತೆÀ ಕಾಂಗ್ರೆಸ್ ನಾಯಕರು ಬಿಜೆಪಿಯವರು ಮೋಸ ಮಾಡಿದ್ದಾರೆ; ಸದಾಶಿವ ಆಯೋಗದ ವರದಿ ಅನುಷ್ಠಾನ ಮಾಡಿಲ್ಲ; ನಾವು ಮಾಡುತ್ತೇವೆ; ಮತ ಕೊಡಿ ಎಂದಿದ್ದರು. ನಿಮ್ಮನ್ನು ನಂಬಿ ಜನರು ಮತ ಹಾಕಿದ್ದರು. 2018ರವರೆಗೆ 5 ವರ್ಷ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿದ್ದರು ಎಂದು ವಿವರಿಸಿದರು.
 
2018ರಲ್ಲಿ ಸಿದ್ದರಾಮಯ್ಯ ಅವರ ಸರಕಾರ ಸೋತಿತು. ಆಗ ಸಿದ್ದರಾಮಯ್ಯನವರು ದೆಹಲಿಯಲ್ಲಿ ನಿಂತು ಹೇಳಿದ್ದೇನು? ಸೋನಿಯಾ ಗಾಂಧಿಯವರಿಗೆ ವರದಿ ಕೊಟ್ಟಿದ್ದೇನು? ದಲಿತರು ಅದರಲ್ಲೂ ವಿಶೇಷವಾಗಿ ಎಡಗೈನವರು, ಅಸ್ಪøಶ್ಯರು ನನಗೆ ಮತ ಹಾಕಿಲ್ಲ; ಅದರಿಂದ ನನ್ನ ಸರಕಾರ ಸೋತಿದೆ ಎಂದಿದ್ದರು. ಅದನ್ನೇ ಇಟ್ಟುಕೊಂಡು 2023ರ ಚುನಾವಣೆವರೆಗೂ ಅವರು ಬಿಜೆಪಿ ಒಳ ಮೀಸಲಾತಿ ವಿಷಯದಲ್ಲಿ ಅನ್ಯಾಯ ಮಾಡಿದೆ ಎಂದಿದ್ದರು. ಮೋದಿಜೀ ಅವರು ಸುಪ್ರೀಂ ಕೋರ್ಟಿನಲ್ಲಿ ಕೇಸ್ ಹಾಕಿಸಿ, ಅದರ ಪರವಾಗಿ ವಾದ ಮಂಡಿಸಿದ್ದರು. ಒಳಮೀಸಲಾತಿ ಎಂದರೆ ಸಾಮಾಜಿಕ ನ್ಯಾಯ; ದಲಿತರಲ್ಲೇ ಹಿಂದುಳಿದವರಿಗೆ ಅದರ ಅವಶ್ಯಕತೆ ಇದೆ ಎಂದು ಸುಪ್ರೀಂ ಕೋರ್ಟಿನಲ್ಲಿ ಆದೇಶ ಮಾಡಿಸಿಕೊಂಡರು ಎಂದು ವಿವರ ನೀಡಿದರು.

ಆದೇಶ ಬಂದು ಒಂದು ವರ್ಷವಾದರೂ ನೀವು ಜಾರಿ ಮಾಡಿಲ್ಲ; ಕುಂಟು ನೆಪವೊಡ್ಡಿ ಮತ್ತೊಂದು ಆಯೋಗ ನೇಮಿಸಿದ್ದೀರಿ. ನಿಮ್ಮ 2023ರ ಪ್ರಣಾಳಿಕೆಯಲ್ಲಿ ಹೇಳಿದ್ದೇನು? ನಮಗೆ ಅಧಿಕಾರ ಕೊಡಿ; ಅಧಿಕಾರಕ್ಕೆ ಬಂದ ಮೊದಲನೇ ಕ್ಯಾಬಿನೆಟ್ ಸಭೆಯಲ್ಲಿ ಒಳ ಮೀಸಲಾತಿ ಜಾರಿ ಮಾಡುವುದಾಗಿ ಹೇಳಿದ್ದರು. 2 ವರ್ಷ ಅದರೂ ಯಾಕೆ ಮಾಡಿಲ್ಲ ಎಂದು ಕೇಳಿದರು. ಅದಕ್ಕಾಗಿ ಇವತ್ತು ಅಸ್ಪøಶ್ಯರು ಅದರಲ್ಲೂ ಮುಖ್ಯವಾಗಿ ದಲಿತರು ರೋಸಿ ಹೋಗಿದ್ದಾರೆ. ಸುಪ್ರೀಂ ಕೋರ್ಟಿನ ಆದೇಶ ಜಾರಿಗಾಗಿ ಆ. 1ರಂದು ಸಾಂಕೇತಿಕವಾಗಿ 30 ಜಿಲ್ಲೆಗಳಲ್ಲಿ ಹೋರಾಟ ಮಾಡಲಿದ್ದೇವೆ. ಮನವಿಗಳನ್ನು ಕೊಡಲಿದ್ದೇವೆ. 11ರಂದು ವಿಧಾನಸಭೆ ಅಧಿವೇಶನ ಪ್ರಾರಂಭ ಆಗಲಿದ್ದು ಅಷ್ಟರಲ್ಲಿ ಜಾರಿ ಮಾಡದೇ ಇದ್ದರೆ,  16ರಿಂದ ಈ ಸರಕಾರದ ವಿರುದ್ಧ ಅಸಹಕಾರ ಚಳವಳಿ ಮಾಡಲಿದ್ದೇವೆ. ಈ ಮಂತ್ರಿಗಳನ್ನು ರಸ್ತೆ ಮೇಲೆ ಓಡಾಡಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ