ಸಂಜಯ್ ಭಂಡಾರಿ ಹಸ್ತಾಂತರಕ್ಕೆ ಅಸ್ತು

ಮಂಗಳವಾರ, 17 ಜನವರಿ 2023 (18:01 IST)
ಶಸ್ತ್ರಾಸ್ತ್ರ ವ್ಯಾಪಾರಿ ಸಂಜಯ್ ಭಂಡಾರಿಯನ್ನು ಭಾರತಕ್ಕೆ ಹಸ್ತಾಂತರಿಸಲು ಇಂಗ್ಲೆಂಡ್​ ಸರ್ಕಾರ ಒಪ್ಪಿಕೊಂಡಿದೆ. ಯುಕೆ ನ್ಯಾಯಾಲಯ ಹಸ್ತಾಂತರಕ್ಕೆ ಅನುಮತಿ ನೀಡಿದ 2 ತಿಂಗಳ ಬಳಿಕ ಬ್ರಿಟನ್ ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರಾವರ್‌ಮನ್ ಇದೀಗ ಹಸ್ತಾಂತರ ಪ್ರಕ್ರಿಯೆಗೆ ಆದೇಶ ಹೊರಡಿಸಿದ್ದಾರೆ. ಭಂಡಾರಿ ವಿರುದ್ಧ ತೆರಿಗೆ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪವಿದೆ. ಅಲ್ಲದೆ, ಕೆಲವು ರಕ್ಷಣಾ ವ್ಯವಹಾರಗಳಲ್ಲಿ ಲಂಚ ಪಡೆದ ಆರೋಪವಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ ಶಸ್ತ್ರಾಸ್ತ್ರ ವ್ಯವಹಾರಗಳಿಗೆ ಸಂಬಂಧಿಸಿದಂತೆ ವಿದೇಶಿ ಕಂಪನಿಗಳಿಂದ 400 ಕೋಟಿ ರೂಪಾಯಿಗೂ ಅಧಿಕ ಮೊತ್ತದ ಕಿಕ್ ಬ್ಯಾಕ್ ಅನ್ನು ಸಂಜಯ್ ಪಡೆದಿದ್ದಾರೆ ಎನ್ನಲಾಗಿದೆ. ದುಬೈನ ಹಲವಾರು ಸಂಸ್ಥೆಗಳಲ್ಲಿ ಮಾಡಿದ ವಹಿವಾಟಿನ ದಾಖಲೆಗಳಿಂದ ಇದು ಸ್ಪಷ್ಟವಾಗಿದೆ. ಈ ವರ್ಷದ ಆರಂಭದಲ್ಲಿ ಲಂಡನ್‌ನ ವೆಸ್ಟ್‌ಮಿನ್‌ಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಪ್ರಕರಣವನ್ನು ಆಲಿಸಿದ ಜಿಲ್ಲಾ ನ್ಯಾಯಾಧೀಶ ಮೈಕೆಲ್ ಸ್ನೋ, ಅವರನ್ನು ಹಸ್ತಾಂತರಿಸುವುದಕ್ಕೆ ಯಾವುದೇ ನಿರ್ಬಂಧಗಳಿಲ್ಲ ಎಂದು ಆದೇಶಿಸಿದರು. ಸಂಬಂಧಿತ ಆರೋಗ್ಯ ನಿಬಂಧನೆಗಳೊಂದಿಗೆ ನವದೆಹಲಿಯಲ್ಲಿರುವ ತಿಹಾರ್ ಜೈಲಿನಲ್ಲಿ ಭಂಡಾರಿ ಅವರನ್ನು ಪ್ರತ್ಯೇಕ ಸೆಲ್‌ನಲ್ಲಿ ಇರಿಸಲಾಗುವುದು ಎಂದು ಭಾರತ ಸರ್ಕಾರ ನೀಡಿದ ಭರವಸೆಯನ್ನು ಉಲ್ಲೇಖಿಸಿ ಅವರು ಹೇಳಿದರು. ಭಂಡಾರಿಗಾಗಿ ಭಾರತ ಸರ್ಕಾರದ ಹಸ್ತಾಂತರ ಕೋರಿಕೆಯನ್ನು ಆಗಿನ ಯುಕೆ ಗೃಹ ಸಚಿವೆ ಪ್ರೀತಿ ಪಟೇಲ್ ಅವರು ಜೂನ್ 2020ರಲ್ಲಿ ಪ್ರಮಾಣೀಕರಿಸಿದರು. ಭಂಡಾರಿ ಹೈಕೋರ್ಟ್​ ಮೊರೆ ಹೋಗಿರುವುದರಿಂದ ಇನ್ನೂ 14 ದಿನಗಳ ಕಾಲ ಸೇಫ್ ಆಗಿದ್ದಾನೆ. ಹೈಕೋರ್ಟ್​ನ ತೀರ್ಪಿನ ಬಳಿಕವಷ್ಟೇ ಭಂಡಾರಿ ಹಸ್ತಾಂತರ ಭವಿಷ್ಯ ಸ್ಪಷ್ಟವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ