ಅಂಕ ದಾಖಲಿಸಲು ಶನಿವಾರ ಕೊನೆ ದಿನ- ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ.ಸುಧಾಕರ್

ಗುರುವಾರ, 15 ಜೂನ್ 2023 (15:07 IST)
ಎಂಜಿನಿಯರಿಂಗ್ ಸೇರಿದಂತೆ ಹಲವು ವೃತ್ತಿಪರ ಕೋರ್ಸುಗಳ ಪ್ರವೇಶಾತಿಗೆ ನಡೆಸಿದ 2023ನೇ ಸಾಲಿನ ಸಿಇಟಿ ಫಲಿತಾಂಶ ಹೊರಬಿದ್ದಿದ್ದು, 2,03,381 ವಿದ್ಯಾರ್ಥಿಗಳು ಬಿ.ಇ. ವ್ಯಾಸಂಗಕ್ಕೆ ಅರ್ಹತೆ ಗಳಿಸಿಕೊಂಡಿದ್ದಾರೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ತಿಳಿಸಿದ್ದಾರೆ.
 
ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಸಿಇಟಿ ಫಲಿತಾಂಶದ ವಿವರಗಳನ್ನು ನೀಡಿದರು.ಮೇ 20 ಮತ್ತು 21ರಂದು ರಾಜ್ಯದ 592 ಪರೀಕ್ಷಾ ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ನಡೆಸಲಾಗಿತ್ತು. 1,14,565 ಬಾಲಕರು ಮತ್ತು 1,29,780 ಬಾಲಕಿಯರು ಸೇರಿದಂತೆ  ಒಟ್ಟು 2,44,345 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು.ಬಿ.ಎಸ್ಸಿ (ಕೃಷಿ) ಕೋರ್ಸಿಗೆ 1,64,187, ಪಶುಸಂಗೋಪನಾ ವಿಜ್ಞಾನಕ್ಕೆ 1,66,756, ಯೋಗ ಮತ್ತು ನ್ಯಾಚುರೋಪತಿಗೆ 1,66,746, ಬಿ.ಫಾರ್ಮಾಗೆ 2,06,191 ಮತ್ತು ಫಾರ್ಮಾ.ಡಿ ಕೋರ್ಸಿಗೆ 2,06,340 ಅಭ್ಯರ್ಥಿಗಳು ಅರ್ಹತೆ ಸಂಪಾದಿಸಿಕೊಂಡಿದ್ದಾರೆ. ಈ ವರ್ಷದಿಂದ ಬಿ.ಎಸ್ಸಿ (ನರ್ಸಿಂಗ್‌) ಕೋರ್ಸಿಗೂ ಸಿಇಟಿ ಪರೀಕ್ಷೆ ನಡೆಸಲಾಗುತ್ತಿದ್ದು, ಇದಕ್ಕೆ 1,66,808 ಮಂದಿ ನಿಗದಿತ ಅರ್ಹತೆ ಗಳಿಸಿಕೊಂಡಿದ್ದಾರೆ ಎಂದು ಸಚಿವರು ವಿವರಿಸಿದರು.
 
ಫಲಿತಾಂಶವು ಪ್ರಾಧಿಕಾರದ ವೆಬ್‌ಸೈಟ್‌ http://kea.kar.nic.in ನಲ್ಲಿ ಲಭ್ಯವಿದ್ದು, ಅಭ್ಯರ್ಥಿಗಳು ವಿಷಯವಾರು ಅಂಕಗಳ ವಿವರಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಯಾವುದಾದರೂ ಅಭ್ಯರ್ಥಿಗಳ ರ್‍ಯಾಂಕ್‌ ತಡೆಹಿಡಿಯಲ್ಪಟ್ಟಿದ್ದರೆ, ಅಂಥವರು ತಮ್ಮ ಅರ್ಹತಾ ಪರೀಕ್ಷೆಯ ಅಂಕಪಟ್ಟಿಯ ಪ್ರತಿಯನ್ನು [email protected] ಗೆ ಇ-ಮೇಲ್‌ ಮಾಡಿ ಅಥವಾ ಪ್ರಾಧಿಕಾರಕ್ಕೆ ಖುದ್ದಾಗಿ ಸಲ್ಲಿಸಿ, ರ್‍ಯಾಂಕಿಂಗ್ ಪಡೆದುಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.
 
ಮಿಕ್ಕಂತೆ 2023ರ ಯು.ಜಿ.ನೀಟ್‌ ಪರೀಕ್ಷೆಯ ಫಲಿತಾಂಶ ಬಂದ ಬಳಿಕ, ಅಲ್ಲಿ ಗಳಿಸಿರುವ ಅಂಕಗಳ ಆಧಾರದ ಮೇಲೆ ವೈದ್ಯಕೀಯ, ದಂತ ವೈದ್ಯಕೀಯ, ಆಯುರ್ವೇದ ಮತ್ತು ಹೋಮಿಯೋಪತಿ ಕೋರ್ಸುಗಳ ಪ್ರವೇಶಕ್ಕೆ ಅಭ್ಯರ್ಥಿಗಳನ್ನು ಅರ್ಹತೆಗೆ ಅನುಗುಣವಾಗಿ ಪರಿಗಣಿಸಲಾಗುವುದು. ಹಾಗೆಯೇ, ಈ ವರ್ಷದ 'ನಾಟಾ' ಅಂಕಗಳ ಆಧಾರದ ಮೇಲೆ ಆರ್ಕಿಟೆಕ್ಚರ್ ಕೋರ್ಸುಗಳ ಪ್ರವೇಶಕ್ಕೆ ರ್‍ಯಾಂಕನ್ನು ಪ್ರಕಟಿಸಲಾಗುವುದು ಎಂದು ಸಚಿವರು ತಿಳಿಸಿದರು.ದಾಖಲೆಗಳ ಆನ್ ಲೈನ್ ಪರಿಶೀಲನೆ ನಂತರ ಕೌನ್ಸೆಲಿಂಗ್ ನಡೆಸಲಾಗುವುದು ಎಂದು ಸಚಿವರು ತಿಳಿಸಿದರು.
 
ಸಿಇಟಿ ಬರೆದ ಅಭ್ಯರ್ಥಿಗಳಲ್ಲಿ ಎಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರಿನ ಶ್ರೀ ಕುಮಾರನ್ಸ್‌ ಚಿಲ್ಡ್ರನ್ಸ್‌ ಹೋಮ್‌ ಕಾಲೇಜಿನ ವಿದ್ಯಾರ್ಥಿ ವಿಘ್ನೇಶ್‌ ನಟರಾಜ್‌ಕುಮಾರ್‍‌ (ಶೇ.97.899), ಬಿ.ಎಸ್ಸಿ (ಕೃಷಿ) ವಿಭಾಗದಲ್ಲಿ ಮಂಗಳೂರಿನ ಎಕ್ಸ್‌ಪರ್ಟ್ ಪಿಯು ಕಾಲೇಜಿನ ಎಸ್.ಎಚ್‌. ಭೈರೇಶ್‌ (ಶೇ 96.75), ನ್ಯಾಚುರೋಪತಿ ಮತ್ತು ಯೋಗವಿಜ್ಞಾನ ವಿಭಾಗದಲ್ಲಿ ಶ್ರೀ ಕುಮಾರನ್‌ ಚಿಲ್ಡ್ರನ್ಸ್‌ ಹೋಂ ಸಂಯುಕ್ತ ಪಿಯು ಕಾಲೇಜಿನ ಕೆ.ಪ್ರತೀಕ್ಷಾ (ಶೇ 98.611) ಮತ್ತು ಬಿ.ಎಸ್ಸಿ (ವೆಟರ್ನರಿ) ವಿಭಾಗದಲ್ಲಿ ಬೆಂಗಳೂರಿನ ಮಹೇಶ್‌ ಪಿಯು ಕಾಲೇಜಿನ ಮಾಳವಿಕಾ ಕಪೂರ್‍‌ (ಶೇ 97.222) ಪ್ರಥಮ ಸ್ಥಾನದ ಶ್ರೇಯಸ್ಸನ್ನು ಪಡೆದುಕೊಂಡಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ