ಆ ಮಕ್ಕಳು ಎಂದಿನಂತೆ ಶಾಲೆಯಲ್ಲಿ ಬಿಸಿಯೂಟ ಸೇವಿಸಿದ್ದಾರೆ. ಆದರೆ ಮನೆಗೆ ಹೋಗಿದ್ದೇ ತಡ, ವಾಂತಿ-ಬೇಧಿಯಿಂದ ನರಳತೊಡಗಿದರು. ಹೀಗಾಗಿ ಅಸ್ವಸ್ಥ ಮಕ್ಕಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಚಿಲಕಲನೇರ್ಪು ಗ್ರಾಮದ ಸಬರಮತಿ ಅನುದಾನಿತ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ 28 ಮಕ್ಕಳು ವಾಂತಿ ಭೇದಿಯಿಂದ ಅಸ್ವಸ್ಥಗೊಂಡಿದ್ದಾರೆ. ಬಾಗೇಪಲ್ಲಿ ತಾಲ್ಲೂಕಿನ ಚೇಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಹದಿಮೂರು ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.
ಉಳಿದ ಮಕ್ಕಳು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕಿಯರು ಆಸ್ಪತ್ರೆಯಲ್ಲಿದ್ದು ಮೇಲು ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಶಾಲೆಯಲ್ಲಿ ಒಂದರಿಂದ ಏಳನೇ ತರಗತಿಯವರೆಗೆ 110 ಮಕ್ಕಳು ವ್ಯಾಸಂಗ ಮಾಡುತ್ತಿದ್ದು, ಊಟ ಮಾಡಿದ ನಂತರ ಶಾಲೆಯಲ್ಲಿ ಇರುವಾಗ ಯಾವುದೇ ರೀತಿಯ ಸಮಸ್ಯೆ ಇರಲಿಲ್ಲ. ಮನೆಗಳಿಗೆ ಮಕ್ಕಳು ತೆರಳಿದ ನಂತರ ವಾಂತಿ ಬೇಧಿ ಕಾಣಿಸಿಕೊಂಡಿದೆ. ಹೀಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಸೂಕ್ತ ಸ್ಥಳ ಇಲ್ಲದೇ, ಒಂದೇ ಹಾಸಿಗೆ ಮೇಲೆ ಇಬ್ಬರು- ಮೂವರು ಮಕ್ಕಳನ್ನು ಮಲಗಿಸಿ ಚಿಕಿತ್ಸೆ ನೀಡುತ್ತಿದ್ದ ದೃಶ್ಯ ಕಂಡು ಬಂದಿದೆ.