ಮುಮ್ತಾಜ್‌ ಅಲಿಗಾಗಿ ಸತತ 8ಗಂಟೆಯಿಂದ ಶೋಧ, ಸಿಗದ ಸುಳಿವು, ಹೆಚ್ಚಿದ ಆತಂಕ

Sampriya

ಭಾನುವಾರ, 6 ಅಕ್ಟೋಬರ್ 2024 (17:48 IST)
Photo Courtesy X
ಮಂಗಳೂರು: ಇಂದು ಮುಂಜಾನೆಯಿಂದ ನಾಪತ್ತೆಯಾಗಿರುವ ಮುಸ್ಲಿಂ ಮುಖಂಡ, ಇಲ್ಲಿನ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷ ಬಿ.ಎಂ.ಮುಮ್ತಾಜ್ ಅಲಿ (52) ಅವರ ಪತ್ತೆಗೆ ಶೋಧ ಕಾರ್ಯ ನಡೆದಿದ್ದು, ಇನ್ನೂ ಅವರ ಸುಳಿವು ಸಿಕ್ಕಿಲ್ಲ.

ಅವರ ಬಿಎಂಡಬ್ಲ್ಯು ಕಾರು ನಗರದ ಹೊರವಲಯದ ಕೂಳೂರು ಸೇತುವೆಯಲ್ಲಿ ಪತ್ತೆಯಾಗಿದ್ದರಿಂದ ಕುಟುಂಬದವರಲ್ಲಿ ಆತಂಕ ಹೆಚ್ಚಾಗಿದೆ. ಇನ್ನೂ ಸಹೋದರ ನಾಪತ್ತೆಯಾಗಿರುವ ಸುದ್ದಿ ಕೇಳಿ ಸ್ಥಳಕ್ಕೆ ಬಂದ ಸಹೋದರ ಮಾಜಿ ಶಾಸಕ ಮೊಯಿದ್ದೀನ್ ಬಾವಾ ಅವರು ಸಹೋದರನನ್ನು ನೆನೆದು ಅತ್ತಿದ್ದಾರೆ.

ಮುಮ್ತಾಜ್ ವಾಟ್ಸ್‌ಆ್ಯಪ್ ಬಳಗಕ್ಕೆ ಕಳುಹಿಸಿ ಸಂದೇಶದಲ್ಲೇನಿದೆ:

ಮುಮ್ತಾಜ್ ಅವರು ರಾತ್ರಿ 3 ಗಂಟೆ ಸುಮಾರಿಗೆ ನಗರದ ಕದ್ರಿ ಆಲ್ವಾರಿಸ್ ರಸ್ತೆಯಲ್ಲಿರುವ ಕ್ಲಾಸಿಕ್
ಸಿಗ್ನೇಚರ್‌ ಅಪಾರ್ಟ್‌ಮೆಂಟ್‌ ಸಮುಚ್ಚಯದ ಮನೆಯಿಂದ ಹೋಗಿದ್ದಾರೆ. ಅರ್ಧ ಗಂಟೆ ಬಳಿಕ ತಮ್ಮ ಕುಟುಂಬದ ಸದಸ್ಯರ ವಾಟ್ಸ್‌ಆ್ಯಪ್ ಬಳಗಕ್ಕೆ ಧ್ವನಿಮುದ್ರಿತ ಸಂದೇಶವನ್ನು ಕಳುಹಿಸಿದ್ದರು. ಮನೆಯವರು ಬೆಳಿಗ್ಗೆ 4.40ರ ಸುಮಾರಿಗೆ ಆ ಸಂದೇಶವನ್ನು ನೋಡಿದ್ದರು. ಅದರಲ್ಲಿ ಮಕ್ಕಳನ್ನು ಉದ್ದೇಶಿಸಿ, 'ನೀವು ಚೆನ್ನಾಗಿರಿ. ನಾನಿನ್ನು ಬದುಕಿರುವುದಿಲ್ಲ' ಎಂದು ಹೇಳಿಕೊಂಡಿದ್ದರು.

ಕುಟುಂಬದವರು ತಕ್ಷಣವೇ ತಂದೆಯನ್ನು ಹುಡುಕಲು ಶುರುಹಚ್ಚಿಕೊಂಡಿದ್ದರು. ಈ ವೇಳೆ ಕೂಳೂರು ಸೇತುವೆಯಲ್ಲಿ ಅವರ ಕಪ್ಪು ಬಣ್ಣದ ಬಿಎಂಡಬ್ಲ್ಯು ಕಾರು ಪತ್ತೆಯಾಗಿತ್ತು. ಕಾರಿನಲ್ಲಿ ಮುಮ್ತಾಜ್ ಅಲಿ ಇರಲಿಲ್ಲ. ಅಪಘಾತಕ್ಕೊಳಗಾದ ಸ್ಥಿತಿಯಲ್ಲಿದ್ದ ಕಾರಿನ ಮುಂಭಾಗ ನಜ್ಜುಗುಜ್ಜಾಗಿತ್ತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ