ಕಾಫಿ ಡೇಗೆ ₹26 ಕೋಟಿ ದಂಡ ವಿಧಿಸಿದ ಸೆಬಿ
ಸಂಸ್ಥಾಪಕ ವಿ.ಜಿ. ಸಿದ್ಧಾರ್ಥ್ ಸಾವಿನ ಬಳಿಕ ಈಗಷ್ಟೇ ಸಾಲದ ಸುಳಿಯಿಂದ ಹೊರಬರುತ್ತಿರುವ ಕಾಫಿ ಡೇ ಎಂಟರ್‌ಪ್ರೈಸಸ್ ಲಿಮಿಟೆಡ್ಗೆ ಸೆಬಿ ಭಾರೀ ಮೊತ್ತದ ದಂಡ ವಿಧಿಸಿದೆ. ಹಣವನ್ನು ಬೇರೆಡೆಗೆ ವರ್ಗಾಯಿಸಿದ ಆರೋಪದ ಮೇಲೆ ಈ ದಂಡ ವಿಧಿಸಲಾಗಿದೆ. ಷೇರು ಮಾರುಕಟ್ಟೆ ನಿಯಂತ್ರಕ ಸಂಸ್ಥೆಯಾಗಿರುವ ಸೆಕ್ಯೂರಿಟೀಸ್ ಆಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಕಾಫಿ ಡೇ ಎಂಟರ್‌ಪ್ರೈಸಸ್‌ಗೆ 26 ಕೋಟಿ ರೂ. (3.2 ಮಿಲಿಯನ್ ಡಾಲರ್) ದಂಡವನ್ನು ವಿಧಿಸಿದೆ ಎಂದು ಸಂಸ್ಥೆಯ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಆದೇಶದಲ್ಲಿ ಹೇಳಲಾಗಿದೆ. ಸೆಬಿಯ ತನಿಖೆಯಲ್ಲಿ 3,535 ಕೋಟಿ ರೂ. ಮೊತ್ತದ ಹಣವನ್ನು ಕಾಫಿ ಡೇ ಎಂಟರ್‌ಪ್ರೈಸಸ್‌ನ 7 ಅಂಗಸಂಸ್ಥೆಗಳಿಂದ ಸಂಸ್ಥೆಯ ಮಾಲೀಕರಿಗೆ ಸಂಬಂಧಿಸಿದ ಒಂದು ಕಂಪನಿಯಾದ ಮೈಸೂರು ಅಮಲ್ಗಮೇಟೆಡ್ ಕಾಫಿ ಎಸ್ಟೇಟ್ಸ್ ಲಿಮಿಟೆಡ್ ಗೆ ವರ್ಗಾಯಿಸಲಾಗಿದೆ ಎಂದು ತಿಳಿದು ಬಂದಿದೆ.