ಕಳ್ಳನೆಂದು ಭಾವಿಸಿ ಎಂ.ಬಿ.ಎ. ಪದವೀಧರನ ಕೊಲೆ

ಸೋಮವಾರ, 11 ಜುಲೈ 2022 (16:29 IST)

ಬೆಂಗಳೂರಿಗೆ ಹೊಸಬರಾಗಿದ್ದ ಅಬಿನಾಶ್, ಮಾರತ್ತಹಳ್ಳಿಯ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರಲ್ಲಿರುವ ಸ್ನೇಹಿತರೊಬ್ಬರ ಫ್ಲ್ಯಾಟ್‌ನಲ್ಲಿ ಉಳಿದುಕೊಂಡಿದ್ದರು' ಎಂದು ಪೊಲೀಸರು ಹೇಳಿದರು.

'ಅಬಿನಾಶ್ ಹಾಗೂ ಸ್ನೇಹಿತ, ಜುಲೈ 4ರಂದು ರಾತ್ರಿ ಮಾರತ್ತಹಳ್ಳಿ ಬಳಿಯ ಬಾರೊಂದಕ್ಕೆ ಹೋಗಿ ಮದ್ಯ ಕುಡಿದಿದ್ದರು. ವೈಯಕ್ತಿಕ ಕೆಲಸ ಇರುವುದಾಗಿ ಹೇಳಿದ್ದ ಸ್ನೇಹಿತ, ಬಾರ್‌ನಿಂದ ಅರ್ಧಕ್ಕೆ ಹೊರಟು ಹೋಗಿದ್ದರು. ಅಭಿನಾಶ್, ತಡರಾತ್ರಿ ಬಾರ್‌ನಿಂದ ಹೊರಬಂದು ಒಬ್ಬರೇ ಫ್ಲ್ಯಾಟ್‌ನತ್ತ ಹೊರಟಿದ್ದರು.'

'ಮದ್ಯದ ಅಮಲಿನಲ್ಲಿದ್ದ ಅಬಿನಾಶ್ ಅವರಿಗೆ ಫ್ಲ್ಯಾಟ್‌ಗೆ ಹೋಗುವ ದಾರಿ ಗೊತ್ತಾಗಿರಲಿಲ್ಲ. ದಾರಿ ತಪ್ಪಿ ಆನಂದನಗರದಲ್ಲಿರುವ ವಂಶಿ ಸಿಟಾಡೆಲ್ ಅಪಾರ್ಟ್‌ಮೆಂಟ್‌ ಸಮುಚ್ಚಯದ ಬಳಿ ಹೋಗಿದ್ದರು. ತಮ್ಮದೇ ಅಪಾರ್ಟ್‌ಮೆಂಟ್‌ ಸಮುಚ್ಚಯ ಇರಬಹುದೆಂದು ತಿಳಿದು, ಒಳಹೋಗಲು ಮುಂದಾಗಿದ್ದರು. ಆದರೆ, ಗೇಟ್‌ ಮುಚ್ಚಿತ್ತು. ಕಾಂಪೌಂಡ್ ಹತ್ತಿ ಜಿಗಿಯಲು ಯತ್ನಿಸಿದ್ದರು' ಎಂದೂ ಪೊಲೀಸರು ಹೇಳಿದರು.

'ವಂಶಿ ಸಿಟಾಡೆಲ್ ಅಪಾರ್ಟ್‌ಮೆಂಟ್‌ ಸಮುಚ್ಚಯದ ಭದ್ರತಾ ಸಿಬ್ಬಂದಿ ಶ್ಯಾಮನಾಥ್ ಹಾಗೂ ಸ್ನೇಹಿತ ಅಜಿತ್, ಅಬಿನಾಶ್‌ ಅವರನ್ನು ತಡೆದು ಪ್ರಶ್ನಿಸಿದ್ದರು. ಪ್ಯಾಂಟ್‌ ಇಲ್ಲದೇ ಚಡ್ಡಿ ಮಾತ್ರ ಧರಿಸಿದ್ದರಿಂದ ಅನುಮಾನಗೊಂಡು ಗುರುತಿನ ಚೀಟಿ ತೋರಿಸುವಂತೆ ಹೇಳಿದ್ದರು. ಆದರೆ, ಅಭಿನಾಶ್ ಸಮರ್ಪಕ ಉತ್ತರ ನೀಡಿರಲಿಲ್ಲ.'

'ಕಳ್ಳನಿರಬೇಕೆಂದು ತಿಳಿದ ಭದ್ರತಾ ಸಿಬ್ಬಂದಿ, ಅಭಿನಾಶ್ ಅವರ ತಲೆಗೆ ರಾಡ್‌ನಿಂದ ಹೊಡೆದಿದ್ದರು. ತೀವ್ರ ರಕ್ತಸ್ರಾವವಾಗಿ ಅಭಿನಾಶ್ ಮೃತಪಟ್ಟಿದ್ದರು. ಘಟನೆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಭದ್ರತಾ ಸಿಬ್ಬಂದಿಯನ್ನು ವಶಕ್ಕೆ ಪಡೆದು, ಅವರ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಆರಂಭದಲ್ಲಿ ಮೃತನ ಹೆಸರು ಗೊತ್ತಾಗಿರಲಿಲ್ಲ. ತನಿಖೆ ಕೈಗೊಂಡಾಗ, ಅಬಿನಾಶ್ ಹೆಸರು ತಿಳಿಯಿತು' ಎಂದೂ ಪೊಲೀಸರು ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ