ಗಡಿ ವಿವಾದದ ಜೀವಂತಿಕೆಗೆ ರಾಜಕೀಯ ಸ್ವಾರ್ಥ ಕಾರಣ: ಶೆಟ್ಟರ್

ಬುಧವಾರ, 2 ನವೆಂಬರ್ 2016 (10:27 IST)
ಹುಬ್ಬಳ್ಳಿ: ಮಹಾರಾಷ್ಟ್ರ ಏಕೀಕರಣ ಸಮಿತಿ ರಾಜಕೀಯ ಹಿತದೃಷ್ಟಿಯಿಂದ ಬೆಳಗಾವಿ ಗಡಿ ವಿವಾದವನ್ನು ಇನ್ನೂ ಜೀವಂತವಾಗಿ ಇಟ್ಟುಕೊಂಡದೆ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಜಗದೀಶ ಶೆಟ್ಟರ್ ಕಿಡಿಕಾರಿದ್ದಾರೆ.
 
ನಗರದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಡಿ ವಿವಾದ ಸದ್ಯ ಸುಪ್ರೀಂಕೋರ್ಟ್ ಅಂಗಳದಲ್ಲಿದ್ದರೂ, ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮಹಾರಾಷ್ಟ್ರ ಏಕೀಕರಣ ಸಮಿತಿ ಗಡಿ ವಿವಾದವನ್ನು ಇನ್ನೂ ಮುಂದುವರಿಸಿಕೊಂಡು ಹೊರಟಿದೆ. ಸಂಬಂಧಿಸಿದಂತೆ ರಾಜ್ಯದ ಪರ ಸಮರ್ಪಕವಾಗಿ ವಾದ ಮಂಡಿಸುವಂತೆ ರಾಜ್ಯ ಸರಕಾರವನ್ನು ಒತ್ತಾಯಿಸಲಾಗುತ್ತಿದೆ ಎಂದರು.
 
ಕನ್ನಡಿಗರ ಹಾಗೂ ಮರಾಠಿಗರ ಮಧ್ಯ ಇರುವ ಸೌಹಾರ್ದತೆ ಕೆಡಿಸುವ ಕೆಲಸ ಎಂಇಎಸ್ ಮಾಡುತ್ತಿದೆ. ಅದರಂತೆ ಕರ್ನಾಟಕದಲ್ಲಿನ ಮರಾಠಿಗರಲ್ಲಿ ಎಂಇಎಸ್ ಕಾರ್ಯಕರ್ತರು ವೈಷಮ್ಯ ಭಾವ ಬಿತ್ತುವ ಕೆಲಸ ಮಾಡುತ್ತಿದ್ದಾರೆ. ಮಹಾರಾಷ್ಟ್ರ ಹಾಗೂ ಗೋವಾದಲ್ಲಿ ವಾಸಿಸುತ್ತಿರುವ ಕನ್ನಡಿಗರ ಮೇಲೆ ನಿರಂತರ ಹಲ್ಲೆ ನಡೆಯುತ್ತಿದೆ. ಮಹಾರಾಷ್ಟ್ರದ ಗಡಿಯಲ್ಲಿ ಕನ್ನಡ ಶಾಲೆಗಳು ಮುಚ್ಚುವ ಆತಂಕ ಎದುರಾಗಿದೆ. ಇವೆಲ್ಲಕ್ಕೂ ಪರಿಹಾರ ಕಂಡುಕೊಳ್ಳಲು ರಾಜ್ಯ ಸರಕಾರ ತಕ್ಷಣ ಎರಡೂ ರಾಜ್ಯಗಳಿಗೆ ಉನ್ನತ ಅಧಿಕಾರಿಗಳನ್ನು ಕಳುಹಿಸಿ ಕನ್ನಡಿಗರ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
 
ರಾಜ್ಯದಲ್ಲಿ ಹೆಚ್ಚಿದ ಇಂಗ್ಲಿಷ್ ಪ್ರಭಾವದಿಂದ ಸರಳತೆಯ ಕನ್ನಡ ಭಾಷೆ ತನ್ನ ಮಹತ್ವ ಕಳೆದುಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯವಾಗಬೇಕು. ನೆರೆಯ ರಾಜ್ಯ ತಮಿಳುನಾಡಿನಲ್ಲಿ ತಮಿಳು ಭಾಷೆಗೆ ನೀಡುವ ಗೌರವವನ್ನು ನಾವು ನಮ್ಮ ಕನ್ನಡ ಭಾಷೆಗೆ ನೀಡುತ್ತಿಲ್ಲ. ರಾಜ್ಯದ ಜನರಲ್ಲಿ ಮೊದಲು ಭಾಷಾಭಿಮಾನದ ಬೀಜ ಬಿತ್ತಬೇಕಿದೆ ಎಂದು ಶೆಟ್ಟರ್ ಅಭಿಪ್ರಾಯ ಪಟ್ಟರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ