ಬೆಂಗಳೂರು: ನಗರದ ಉದ್ಯಮಿಯೊಬ್ಬರ ಮಗನನ್ನು ಅಪಹರಿಸುವುದಾಗಿ ಬೆದರಿಸಿ 1 ಕೋಟಿ ಸುಲಿಗೆ ಮಾಡಲು ರೂಪಿಸಿದ್ದ ಸಂಚನ್ನು ಮಂಗಳವಾರ ಬೆಂಗಳೂರು ಪೊಲೀಸರು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ವಿಫಲಗೊಳಿಸಿದ್ದಾರೆ.
ಪೊಲೀಸರ ಪ್ರಕಾರ, ಸಂತ್ರಸ್ತನೊಂದಿಗೆ ಹಣಕಾಸಿನ ವಿವಾದ ಹೊಂದಿದ್ದ ಸ್ಥಳೀಯ ಉದ್ಯಮಿ, ಈ ಯೋಜನೆಯನ್ನು ಕಾರ್ಯಗತಗೊಳಿಸಲು ದೆಹಲಿಯ ಮೂವರನ್ನು ನೇಮಿಸಿಕೊಂಡಿದ್ದಾನೆ.
ಆರೋಪಿಯು ಉತ್ತರ ಭಾರತದ ಕುಖ್ಯಾತ ದರೋಡೆಕೋರನ ಹೆಸರಿನಲ್ಲಿ ಬೆದರಿಕೆ ಕರೆ ಮಾಡುವ ಉದ್ದೇಶ ಹೊಂದಿದ್ದನು. ಪ್ರಕರಣದಲ್ಲಿ ಮಾಸ್ಟರ್ ಮೈಂಡ್ ಮತ್ತು ಉತ್ತರ ಪ್ರದೇಶದ ಮೀರತ್ ಮೂಲದ ಆತನ ಮೂವರು ಸಹಚರರನ್ನು ಬಂಧಿಸಲಾಗಿದೆ.
ಜುಲೈ 9 ರಂದು ಸಂತ್ರಸ್ತರು ಪೊಲೀಸರಿಗೆ ದೂರು ನೀಡಿದ್ದು, ಅಪರಿಚಿತ ವ್ಯಕ್ತಿಯೊಬ್ಬರು 1ಕೋಟಿ ರೂಪಾಯಿ ನೀಡದಿದ್ದರೆ ತಮ್ಮ ಮಗನಿಗೆ ಅಪಹರಿಸುವುದಾಗಿ ಬೆದರಿಕೆ ಕರೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆಗಾಗಿ ಕೇಂದ್ರ ವಿಭಾಗ ಮತ್ತು ಕೇಂದ್ರ ಅಪರಾಧ ಶಾಖೆಯ (ಸಿಸಿಬಿ) ಅಧಿಕಾರಿಗಳನ್ನು ಒಳಗೊಂಡ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ.