ಉಭಯ ರಾಜ್ಯಗಳ ಸಂಧಾನ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಉಭಯ ರಾಜ್ಯಗಳಿಗೆ ತಜ್ಞರ ಸಮಿತಿ ಕಳುಹಿಸಿ ವರದಿ ನೀಡಲಿ. ತಜ್ಞರ ವರದಿಯ ಆಧಾರದ ಮೇಲೆ ಉಭಯ ರಾಜ್ಯಗಳ ವಾಸ್ತವ ಪರಿಸ್ಥಿತಿ ತಿಳಿಯುತ್ತದೆ. ಆದರೆ, ತಜ್ಞರ ಸಮಿತಿ ರಚಿಸಲು ತಮಿಳುನಾಡು ಒಪ್ಪುತ್ತಿಲ್ಲ. ಹಾಗೂ ಸುಪ್ರೀಂಕೋರ್ಟ್‌ನಲ್ಲೂ ನಾವು ಆಕ್ಷೇಪಣೆ ಸಲ್ಲಿಸುತ್ತೇವೆ ಎಂದು ಪಟ್ಟು ಹಿಡಿದಿದೆ ಎಂದರು.
ನಾವು ಕುಡಿಯಲು ನೀರು ಕೇಳುತ್ತಿದ್ದೇವೆ. ಆದರೆ, ತಮಿಳುನಾಡು ಕುರುವೈ ಬೆಳೆ ಬೆಳೆಯಲು ನೀರು ಕೇಳುತ್ತಿದೆ. ಮೆಟ್ಟುರು ಜಲಾಶಯದಲ್ಲಿ 43 ಟಿಎಂಸಿ ನೀರು ಇದೆ. ತಮಿಳುನಾಡಿನಲ್ಲಿ ಅಕ್ಟೋಬರ್‌ನಿಂದ ಡಿಸೆಂಬರ್ ತಿಂಗಳವರೆಗೂ ಮಳೆಯಿಂದ ಹೆಚ್ಚುವರಿ 20 ಟಿಎಂಸಿ ನೀರು ಲಭ್ಯವಾಗುತ್ತೆ. ಅವರು 18.5 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬೆಳೆ ಬೆಳೆಯುತ್ತಿದ್ದಾರೆ. ಆದರೆ, ನಾವು ಕೇವಲ 6.5 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಬೆಳೆ ಬೆಳೆಯುತ್ತಿದ್ದೇವೆ. ಈಗಾಗಲೇ ನಮ್ಮ ರೈತರು ಸಾಕಷ್ಟು ತ್ಯಾಗ ಮಾಡಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.