Pehalgam attack: ಪಹಲ್ಗಾಮ್ ಉಗ್ರರ ಸಂಚು ಹೇಗಿತ್ತು, ದಾಳಿಗೆ ಮುನ್ನ ಏನು ಮಾಡಿದ್ದರು ಇಲ್ಲಿದೆ ವಿವರ

Krishnaveni K

ಸೋಮವಾರ, 28 ಏಪ್ರಿಲ್ 2025 (11:42 IST)
ಜಮ್ಮು ಕಾಶ್ಮೀರ: ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸುವ ಮೊದಲು ಉಗ್ರರು ಹೇಗೆ ಬಂದಿದ್ದರು, ಸಂಚು ಹೇಗಿತ್ತು ಎಂಬ ವಿವರ ಈಗ ಬಯಲಾಗುತ್ತಿದೆ.

ಪಹಲ್ಗಾಮ್ ತಾಣಕ್ಕೆ ಬರಬೇಕೆಂದರೆ ಒಂದೋ ಕಾಲ್ನಡಿಗೆಯಲ್ಲಿ ಇಲ್ಲವೇ ಕುದುರೆ ಮೂಲಕವೇ ಬರಬೇಕು. ಇಲ್ಲಿಗೆ ಸರಿಯಾದ ರಸ್ತೆ ಮಾರ್ಗವಿಲ್ಲ. ಹೀಗಾಗಿ ಉಗ್ರರು ಹೇಗೆ ಬಂದಿರಬಹುದು ಎಂಬ ಕುತೂಹಲ ಎಲ್ಲರಿಗೂ ಇದೆ.

ಮೂಲಗಳ ಪ್ರಕಾರ ಕಾಡಿನ ಮಾರ್ಗದಲ್ಲಿ ಸುಮಾರು 22 ಗಂಟೆ ನಡೆದುಕೊಂಡೇ ಶಸ್ತ್ರಾಸ್ತ್ರ ಸಜ್ಜಿತರಾಗಿ ಉಗ್ರರು ಪಹಲ್ಗಾಮ್ ತಲುಪಿದ್ದಾರೆ ಎನ್ನಲಾಗಿದೆ. ಕೆಲವು ಹೊತ್ತು ಪ್ರವಾಸಿಗರ ಸೋಗಿನಲ್ಲೇ ಪಹಲ್ಗಾಮ್ ಬಯಲಿನಲ್ಲಿ ಸುತ್ತಾಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಹೀಗಾಗಿ ಅವರಿಗೆ ಅಲ್ಲಿಯೇ ಇದ್ದ ವ್ಯಾಪಾರಿಗಳು ಅಥವಾ ಸ್ಥಳೀಯರು ಸಹಾಯ ಮಾಡಿರಬಹುದು ಎನ್ನಲಾಗಿದೆ.

ಉಗ್ರರು ಸ್ಯಾಟ್ ಲೈಟ್ ಫೋನ್ ಬಳಕೆ ಮಾಡಿದ್ದರು ಎನ್ನಲಾಗಿದ್ದು, ಇದೇ ಫೋನ್ ಮೂಲಕ ಅವರಿಗೆ ಕರಾಚಿಯಿಂದ ಕರೆ ಬಂದಿತ್ತು. ಕರೆ ಬಂದ ತಕ್ಷಣವೇ ಇಲ್ಲಿ ದಾಳಿ ಆರಂಭಿಸಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಘಟನೆಯಲ್ಲಿ ಪಾಕಿಸ್ತಾನದ ಕೈವಾಡವಿರುವುದು ಸ್ಪಷ್ಟವಾಗಿದೆ. ಅಂದು ಸ್ಥಳದಲ್ಲಿದ್ದ ಪ್ರವಾಸಿಗರಲ್ಲಿ ಕೆಲವರು ಅಲ್ಲಿಯೇ ಕೆಲವರು ಮಾರಾಟ ಮಾಡಿಕೊಂಡಿದ್ದವರೇ ಸಹಾಯ ಮಾಡಿರಬಹುದು ಎನ್ನಲಾಗುತ್ತಿದೆ. ಯಾಕೆಂದರೆ ಅಂದು ಶಾಲ್ ಒಂದನ್ನು ಕಡಿಮೆ ಬೆಲೆಗೆ ಮಾರುತ್ತಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಕಾಡಿನ ಕಡೆಗೆ ಕೂಗಿಕೊಂಡು ಹೋದ ಬಳಿಕ ಗುಂಡಿನ ದಾಳಿ ಶುರುವಾಗಿತ್ತು. ಹೀಗಾಗಿ ಅಲ್ಲಿಯವರಿಗೆ ಮೊದಲೇ ಮುನ್ಸೂಚನೆ ಇತ್ತು ಎಂದೂ ಸಂಶಯ ವ್ಯಕ್ತಪಡಿಸಲಾಗುತ್ತಿದೆ.

ಇನ್ನು, ಉಗ್ರರ ದಾಳಿಯ ಸಂಪೂರ್ಣ ವಿಡಿಯೋಗಳನ್ನು ಸ್ಥಳೀಯರೊಬ್ಬರು ಮರವೊಂದರಲ್ಲಿ ಅಡಗಿ ಕೂತು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಒಂದು ವೇಳೆ ಇದು ನಿಜವೇ ಆಗಿದ್ದರೆ ಪ್ರಕರಣದ ತನಿಖೆ ನಡೆಸುತ್ತಿರುವ ಎನ್ ಐಎ ಗೆ ಇದು ಮಹತ್ವದ ಸುಳಿವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ