ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೇಳುವ ಶಕ್ತಿ ಸಿಎಂಗೆ ಇಲ್ಲ: ಜನಾರ್ದನ ರೆಡ್ಡಿ ವ್ಯಂಗ್ಯ

Sampriya

ಮಂಗಳವಾರ, 31 ಡಿಸೆಂಬರ್ 2024 (18:17 IST)
Photo Courtesy X
ಬಳ್ಳಾರಿ: ಗುತ್ತಿಗೆದಾರ ಸಚಿನ್‌ ಪಾಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್‌ ಖರ್ಗೆ ಹಗುರುವಾಗಿ ಮಾತನಾಡಿ, ದುರಹಂಕಾರ ತೋರಿದ್ದಾರೆ. ಅವರ ರಾಜೀನಾಮೆ ಪಡೆಯಲು ಸಿಎಂ ಸಿದ್ದರಾಮಯ್ಯಗೆ ಧೈರ್ಯ ಇಲ್ಲದಂತಾಗಿದೆ ಎಂದು ಶಾಸಕ ಜನಾರ್ದನ ರೆಡ್ಡಿ ವ್ಯಂಗ್ಯ ಮಾಡಿದ್ದಾರೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುತ್ತಿಗೆದಾರ ಸಚಿನ್‌ ಪಾಂಚಾಳ ಆತ್ಮಹತ್ಯೆಯು ಗಂಭೀರ ಪ್ರಕರಣ. ಡೆತ್‌ನೋಟ್‌ನಲ್ಲಿ ಅವರು ಪ್ರಿಯಾಂಕ್‌ ಖರ್ಗೆ ಆಪ್ತ ರಾಜು ಎಂಬುವರ ಹೆಸರು ಬರೆದಿಟ್ಟಿದ್ದಾರೆ. ಅವರಿಗಾದ ಕಿರುಕುಳ, ಶೇ 5ರ ಕಮಿಷನ್‌, ಹಣಕ್ಕಾಗಿ ಪೀಡನೆ, ಪ್ರಾಣ ಬೆದರಿಕೆ ಹಾಕಿರುವುದನ್ನು ಅವರು ಬರೆದಿಟ್ಟಿದ್ದಾರೆ. ಆದರೂ ಈ ಪ್ರಕರಣದ ಬಗ್ಗೆ ಸರ್ಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ. ಆತ್ಮಹತ್ಯೆ, ಕೊಲೆಗಳು ಈ ಸರ್ಕಾರಕ್ಕೆ ಲೆಕ್ಕವೇ ಇಲ್ಲ ಎಂಬಂತಾಗಿದೆ. ಡೆತ್‌ ನೋಟ್‌ ಬಗ್ಗೆ ಪ್ರಿಯಾಂಕ್‌ ಖರ್ಗೆ, ಗೃಹ ಮಂತ್ರಿ, ಉಪ ಮುಖ್ಯಮಂತ್ರಿ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.

ಚಂದ್ರಶೇಖರ್‌ ಎಂಬುವವರು ಆತ್ಮಹತ್ಯೆ ಮಾಡಿಕೊಳ್ಳದಿದ್ದರೆ ವಾಲ್ಮೀಕಿ ನಿಗಮದ ಹಗರಣ ಹೊರಗೇ ಬರುತ್ತಿರಲಿಲ್ಲ. ನಾಗೇಂದ್ರ ರಾಜೀನಾಮೆ ನೀಡುತ್ತಿರಲಿಲ್ಲ. ಸದ್ಯ ಈ ಪ್ರಕರಣದಲ್ಲಿ ಗುತ್ತಿಗೆದಾರ ಡೆತ್‌ ನೋಟ್‌ ಕೈಲಿ ಹಿಡಿದುಕೊಂಡೇ ಪ್ರಾಣ ಬಿಟ್ಟರೂ, ಸರ್ಕಾರ ಪ್ರಿಯಾಂಕ್‌ ಪರ ನಿಂತಿದೆ. ಜನ ಇದನ್ನೆಲ್ಲ ಗಮನಿಸುತ್ತಿದ್ದಾರೆ ಎಂದು ಎಚ್ಚರಿಸಿದರು.

ಇನ್ನೂ ಪ್ರಿಯಾಂಕ್‌ ಖರ್ಗೆ ರಾಜೀನಾಮೆ ಪಡೆಯುವ ಶಕ್ತಿ ಸಿಎಂಗೆ ಇಲ್ಲವಾಗಿದೆ. ಸರ್ಕಾರದಲ್ಲಿ ಖರ್ಗೆ ಅವರೇ ಎಲ್ಲ ಆಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರೀಯ ಕಾಂಗ್ರೆಸ್‌ ಅಧ್ಯಕ್ಷರಾಗಿರುವುದರಿಂದ ಪ್ರಿಯಾಂಕ್‌ಗೆ ಸೊಕ್ಕು ಬಂದಿದೆ. ದುರಂಹಕಾರ ಬಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ