ಬೆಳಗಾವಿ: ಅರ್ಥಮಾಂತ್ರಿಕ, ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಅಗಲಿಕೆ ಕೇವಲ ಭಾರತಕ್ಕೆ ಮಾತ್ರವಲ್ಲ; ಇಡೀ ಜಗತ್ತಿಗೆ ದೊಡ್ಡ ನಷ್ಟ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು.
ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವಕ್ಕಾಗಿ ಇಲ್ಲಿನ ಸಿ.ಪಿ.ಇಡಿ ಮೈದಾನದಲ್ಲಿ ಹಾಕಿದ್ದ ಗಾಂಧಿ ಭಾರತ ವೇದಿಕೆಯಲ್ಲೇ ಶುಕ್ರವಾರ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
ಅವರೊಂದು ಮಾತು ಹೇಳುತ್ತಿದ್ದರು; ನಾನು ಬದುಕಿರುವಾಗ ನನ್ನ ಬಗ್ಗೆ ಅಷ್ಟೊಂದು ಪ್ರಚಾರ ಸಿಗುವುದಿಲ್ಲ. ನಾನು ಸತ್ತ ಮೇಲೆ ಮಾಧ್ಯಮದವರು ಹೆಚ್ಚು ಪ್ರಚಾರ ಮಾಡುತ್ತಾರೆ ಎಂದು. ಆ ಮಾತು ಇಂದು ನಿಜವಾಗಿದೆ ಎಂದು ನೆನೆದರು.
ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ನಾವು ಆರಂಭಿಸಿದಾಗ ನಾವು ಮನಮೋಹನ್ ಸಿಂಗ್ ಅವರನ್ನು ಕರೆಸಿದ್ದೆವು. ಕರ್ನಾಟಕದ ಆರ್ಥಿಕತೆ ಬಗ್ಗೆ ಒಂದು ಕಾರ್ಯಕ್ರಮಕ್ಕೆ ನಾವು ಕರೆಸಿದ್ದೆವು. ಆಗ, ನಮ್ಮ ಅವಧಿಯಲ್ಲಿ ರಾಜ್ಯದ ಆರ್ಥಿಕತೆ ಅತ್ಯಂದ ಸದೃಡವಾಗಿದೆ ಎಂದು ಮೆಚ್ಚುಗೆ ಸೂಚಿಸಿದ್ದರು ಎಂದರು.
ಬಡತನದಿಂದ ಬಂದ ಮನಮೋಹನ ಸಿಂಗ್ ಅವರಿಗೆ ದೇಶದ ದೊಡ್ಡ ಹುದ್ದೆಗಳು ಸಿಕ್ಕವು. ಆದರೆ, ಅವರು ತಮ್ಮ ಬಡತನ ನಿವಾರಣೆ ಮಾಡಿಕೊಳ್ಳುವ ಯೋಚನೆ ಮಾಡಿದೇ, ಇಡೀ ದೇಶದ ದಾರಿದ್ರ್ಯ ನಿವಾರಣೆ ಮಾಡಿದರು. ಅವರನ ಆರ್ಥಿಕ ನೀತಿಗಳು, ವ್ಯಕ್ತಿತ್ವ, ಸರಳತೆ ಬಗ್ಗೆ ಮಾತನಾಡುವಾಗ ನನಗೆ ಅಚ್ಚರಿಯಾಗುತ್ತದೆ ಎಂದರು.
ಗಾಂಧಿ ಭಾರತ ವೇದಿಕೆಯಲ್ಲೇ ಮತ್ತೊಬ್ಬ ಗಾಂಧಿ ಅವರಿಗೆ ಶ್ರದ್ಧಾಂಜಲಿ ನೀಡಿದ್ದು ದುಃಖದ ಸಂಗತಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಮರಿಸಿದರು.
ಗಾಂಧಿ ಭಾರತ ಕಾರ್ಯಕ್ರಮದಲ್ಲಿ ಅವರು ಜೂಮ್ ಮೀಟ್ ಮೂಲಕ ಭಾಗವಹಿಸುವಂತೆ ಯೋಚಿಸಿದ್ದೆವು. ಆದರೆ, ವಿಧಿ ಆಟ ಬೇರೆ ಆಗಿತ್ತು. ಒತ್ತುವರಿ ಮಾಡಿಕೊಳ್ಳುವ ಭೂಮಿಗೆ ನಗರದಲ್ಲಿ ಎರಡು ಪಟ್ಟು ಹಳ್ಳಿಗಳಲ್ಲಿ ನಾಲ್ಕು ಪಟ್ಟು ಪರಿಹಾರ ಕೊಡಬೇಕು ಎಂಬ ಅವರ ನಿಯಮ ಅಚ್ಚರಿ ಮೂಡಿಸಿತ್ತು ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ಸಚಿವ ಎಚ್.ಕೆ.ಪಾಟೀಲ, ಹಲವರು ಸಚಿವರು, ಶಾಸಕರು, ಜನಪ್ರತಿನಿಧಿಗಳು, ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರೂ ನಮನ ಸಲ್ಲಿಸಿದರು.