ಕರಾವಳಿಯಲ್ಲಿ ಮಳೆ ಶುರುವಾಗುತ್ತಿದ್ದಂತೇ ಶಿರಾಡಿ ಘಾಟಿ ಗೋಳು ಶುರು

Krishnaveni K

ಶನಿವಾರ, 31 ಆಗಸ್ಟ್ 2024 (09:07 IST)
ಸಕಲೇಶಪುರ: ಇತ್ತ ಕರಾವಳಿಯಲ್ಲಿ ಮಳೆ ಜೋರಾಗುತ್ತಿದ್ದಂತೇ ಶಿರಾಡಿ ಘಾಟಿಯಲ್ಲಿ ಮತ್ತದೇ ಗೋಳು ಶುರುವಾಗಿದೆ. ಶಿರಾಡಿ ಘಾಟಿಯಲ್ಲಿ ಗುಡ್ಡ ಕುಸಿತದ ಭೀತಿಯಲ್ಲೇ ವಾಹನ ಸಂಚರಿಸುವಂತಾಗಿದೆ.

ಜುಲೈ, ಆಗಸ್ಟ್ ಮೊದಲ ವಾರದಲ್ಲಿ ಭಾರೀ ಮಳೆಯಿಂದಾಗಿ ಶಿರಾಡಿ ಘಾಟಿಯಲ್ಲಿ ರಸ್ತೆ ಮತ್ತು ರೈಲ್ವೇ ಮಾರ್ಗದಲ್ಲಿ ಪದೇ ಪದೇ ಗುಡ್ಡ ಕುಸಿತವಾಗಿ ಸಂಚಾರಕ್ಕೆ ಅಡ್ಡಿಯಾಗುತ್ತಲೇ ಇತ್ತು. ಬೆಂಗಳೂರಿನಿಂದ ಕರಾವಳಿ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದೆ.

ಶಿರಾಡಿಯಲ್ಲಿ ರಸ್ತೆಯೇ ಕುಸಿದು ಕೆಲವು ದಿನ ಬಸ್ ಸಂಚಾರಕ್ಕೆ ಅಡ್ಡಿಯಾಗಿತ್ತು. ರೈಲ್ವೇ ಹಳಿ ಮೇಲೂ ಭಾರೀ ಪ್ರಮಾಣದಲ್ಲಿ ಮಣ್ಣು ಕುಸಿದು ಪದೇ ಪದೇ ರೈಲು ಸಂಚಾರದಲ್ಲಿ ವ್ಯತ್ಯಯವಾಗಿತ್ತು. ಇದೀಗ ಮತ್ತೆ ಕರಾವಳಿ ಮತ್ತು ಶಿರಾಡಿ ಪರಿಸರದಲ್ಲಿ ಮಳೆ ಜೋರಾಗಿದ್ದು, ಮತ್ತೆ ಗುಡ್ಡ ಕುಸಿತದ ಭೀತಿ ಎದುರಾಗಿದೆ.

ರಸ್ತೆ ದುರಸ್ಥಿ, ಎತ್ತಿನ ಹೊಳೆ ಯೋಜನೆ ಸೇರಿದಂತೆ ಇತ್ತೀಚೆಗಿನ ದಿನಗಳಲ್ಲಿ ನಡೆದ ಸತತ ಕಾಮಗಾರಿಗಳಿಂದಾಗಿ ಶಿರಾಡಿ ರಸ್ತೆ ಈಗ ಅಪಾಯಕಾರಿಯಾಗಿ ಪರಿಣಮಿಸಿದೆ. ಪದೇ ಪದೇ ಗುಡ್ಡ ಕುಸಿತವಾಗುತ್ತಿದ್ದು, ಇಲ್ಲಿ ಸಂಚರಿಸುವಾಗ ಜೀವ ಕೈಯಲ್ಲಿ ಹಿಡಿದುಕೊಂಡೇ ಸಂಚರಿಸಬೇಕಾದ ಪರಿಸ್ಥಿತಿಯಿದೆ. ಸತತ ಮಳೆಯಿಂದಾಗಿ ಮಣ್ಣು ಸಡಿಲವಾಗಿದ್ದು, ಕೆಲವೊಂದು ಪ್ರದೇಶಗಳಲ್ಲಿ ಎಚ್ಚರಿಕೆಯಿಂದ ಸಂಚರಿಸಲು ಸೂಚನೆ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ