ಬೆಂಗಳೂರು : 3 ದಿನ ಟ್ರಾಫಿಕ್ ಸಮಸ್ಯೆ ಸಹಿಸಿಕೊಂಡರೆ ಮುಂದಿನ 50 ವರ್ಷ ಕುಡಿಯುವ ನೀರಿಗೆ ಸಮಸ್ಯೆ ಆಗಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬೆಂಗಳೂರು ನಗರದ ಜನತೆಯ ಕ್ಷಮಾಪಣೆ ಕೇಳುತ್ತೇನೆ. 3ದಿನ ಬೆಂಗಳೂರಿನಲ್ಲಿ ಸ್ವಲ್ಪ ಟ್ರಾಫಿಕ್ ಸಮಸ್ಯೆ ಆಗುತ್ತದೆ. ಆದರೆ ಮುಂದಿನ 50ವರ್ಷಗಳ ಕಾಲ ಕುಡಿಯುವ ನೀರಿಗೆ ಸಮಸ್ಯೆ ಆಗಲ್ಲ. ಬನ್ನಿ ಎಲ್ಲರೂ ಪಾದಯಾತ್ರೆಯಲ್ಲಿ ಭಾಗವಹಿಸಿ ಹೆಜ್ಜೆ ಹಾಕಿ ಎಂದು ಒತ್ತಾಯಿಸಿದರು.
ಪಾದಯಾತ್ರೆ ಬೆಂಗಳೂರಿಗೆ ಕಾಲಿಟ್ಟಿದೆ. ಪೊಲೀಸರು ನಮಗೆ ಬೆಂಗಾವಲಾಗಿ ನಿಂತಿದ್ದಾರೆ. ಬಿಬಿಎಂಪಿ ಕಮೀಷನರ್ ನಮ್ಮ ಬ್ಯಾನರ್ ಸ್ವಲ್ಪ ಕೀಳಿಸಿದ್ದಾರೆ. ಆದರೆ ಅಷ್ಟರಲ್ಲಿ ನಮ್ಮ ನಾಯಕರು ಗಲಾಟೆ ಮಾಡಿ ಉಳಿಸಿದ್ದಾರೆ. ನಮ್ಮ ಬ್ಯಾನರ್ ಕಿತ್ತರೆ ರಾತ್ರಿ ಬಿಜೆಪಿ ನಾಯಕರ ಬ್ಯಾನರ್ ಎಲ್ಲೆಲ್ಲಿ ಹಾಕಿದ್ದಾರೆ, ಅಲ್ಲೆಲ್ಲ ಕಿತ್ತು ಹಾಕಲು ಕಾರ್ಯಕರ್ತರಿಗೆ ಹೇಳಿದ್ದೆ.
ಆ ಮೇಲೆ ಬಿಬಿಎಂಪಿಯವರು ಸುಮ್ಮನಾಗಿದ್ದಾರೆ. ಗೌರವ್ ಗುಪ್ತ ಬಿಬಿಎಂಪಿ ಬೋರ್ಡ್ ತಗೆದು ಬಿಜೆಪಿ ಕಚೇರಿ ಎಂದು ಬೋರ್ಡ್ ಹಾಕಿಕೊಳ್ಳಲಿ ಕಿಡಿಕಾರಿದರು.
ಬೆಂಗಳೂರಿನಲ್ಲಿ ನಮ್ಮದು 5 ದಿನದ ಪಾದಯಾತ್ರೆ ಇತ್ತು. ಆದರೆ ಸಿಎಂ ಶುಭ ಶುಕ್ರವಾರ ಬಜೆಟ್ ಮಂಡನೆ ಮಾಡಬೇಕು ಎಂದರು. ಅದಕ್ಕೆ 2 ದಿನ ಪಾದಯಾತ್ರೆ ಮೊಟಕು ಮಾಡಿದೆವು ಎಂದ ಅವರು, ನಮ್ಮ ಪಾದಯಾತ್ರೆಗೆ ಮುರುಗ ಮಠದ ಶ್ರೀಗಳು ಆಶೀರ್ವದಿಸಿದ್ದಾರೆ. ಅವರಿಗೂ ವಿಶೇಷ ಧನ್ಯವಾದ. ನ್ಯಾಷನಲ್ ಕಾಲೇಜು ಮೈದಾನದ ಬೃಹತ್ ಸಮಾವೇಶಕ್ಕೆ ರಾಷ್ಟ್ರೀಯ ನಾಯಕರನ್ನು ಆಹ್ವಾನಿಸಿದ್ದೇವೆ ಎಂದು ತಿಳಿಸಿದರು.