ಬೆಂಗಳೂರು : ಹರಿಯುವ ನೀರಿಗೆ ದೊಣ್ಣೆ ನಾಯಕನ ಅಪ್ಪಣೆ ಬೇಕಾಗಿಲ್ಲ.
ಮೇಕೆದಾಟು, ಮಹದಾಯಿಗೆ ಪರಿಸರ ಇಲಾಖೆ ಅನುಮತಿ ಪಡೆಯಲು ಒತ್ತಾಯಿಸಿದ್ದೇವೆ ಎಂದು ಸರ್ವಪಕ್ಷ ಸಭೆಯ ಬಳಿಕ ವಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದ್ದಾರೆ.
ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಮೇಕೆದಾಟು, ಕೃಷ್ಣ ಮೇಲ್ದಂಡೆ ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗಳ ವಿಚಾರವಾಗಿ ಸಿಎಂ ಬಸವರಾಜ ಬೊಮ್ಮಾಯಿ ಸರ್ವಪಕ್ಷ ಸಭೆ ನಡೆಸಿದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಮೇಕೆದಾಟು ಪಾದಯಾತ್ರೆ ವೇಳೆ ಹಾಕಿರುವ ಕೇಸ್ಗಳ ವಾಪಸ್ಗೆ ಸಿಎಂ ಜೊತೆ ಕೇಳಿದ್ದೇವೆ. ಪರಿಶೀಲಿಸುತ್ತೇವೆ ಎಂದು ಸಿಎಂ ಹೇಳಿದ್ದಾರೆ ಎಂದರು.
ಈ ಮೊದಲು ಸಭೆಯಲ್ಲಿ ಮೇಕೆದಾಟು ಯೋಜನೆ ಜಾರಿ ವಿಚಾರವಾಗಿ ಪ್ರಧಾನಿ ಮೋದಿ ಬಳಿಗೆ ನಿಯೋಗ ಕೊಂಡೊಯ್ಯಲು ಸರ್ವಪಕ್ಷ ಸಭೆ ಒಮ್ಮತವಾಗಿ ನಿರ್ಣಯಿಸಿದೆ. ಕಾವೇರಿ ನೀರು ಹಂಚಿಕೆಯಾಗಿರುವಾಗ ಮೇಕೆದಾಟು ಯೋಜನೆ ಮಾಡಲು ಯಾವುದೇ ಸಮಸ್ಯೆ ಇಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯ ಹೇಳಿದ್ರು.
ತಮಿಳುನಾಡು ವಿರೋಧಕ್ಕೆ ಕ್ಯಾರೆ ಮಾಡದಿರಲು ಸಭೆಯಲ್ಲಿ ಸಹಮತ ವ್ಯಕ್ತವಾಯಿತು. ಇದೇ ವೇಳೆ, ಪರಸ್ಪರ ಮಾತುಕತೆ ಮೂಲಕ ಮೇಕೆದಾಟು ವಿವಾದ ಬಗೆಹರಿಸಿಕೊಳ್ಳಿ, ಕೇಂದ್ರವೂ ಅಗತ್ಯ ಬಿದ್ರೆ ಮಧ್ಯಸ್ಥಿಕೆ ವಹಿಸಲಿದೆ ಅಂದಿದ್ದ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೇಳಿಕೆಗೆ ಸಿದ್ದರಾಮಯ್ಯ ಸೇರಿದಂತೆ ವಿಪಕ್ಷ ನಾಯಕರು ಆಕ್ಷೇಪಿಸಿದರು.