ಈ ಅವಧಿಯನ್ನು ಸಿದ್ದರಾಮಯ್ಯನವರೇ ಸಿಎಂ ಆಗಿ ಪೂರೈಸುತ್ತಾರೆ: ಜಿ ಪರಮೇಶ್ವರ್‌

Sampriya

ಸೋಮವಾರ, 6 ಏಪ್ರಿಲ್ 2026 (16:51 IST)
ಮೈಸೂರು: ಇನ್ನೆರಡು ವರ್ಷ ಸಿಎಂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿಯಾಗಿರುತ್ತಾರೆಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.

ಇಲ್ಲಿ ಸೋಮವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘2013ರಲ್ಲಿ ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿ ಎಂದು ಹೈಕಮಾಂಡ್ ಘೋಷಿಸಿರಲಿಲ್ಲ. ಆದರೂ ಅವರೇ ಆ ಅವಧಿಯನ್ನು ಸಿಎಂ ಆಗಿ ಪೂರ್ಣಗೊಳಿಸಿದರು. 2023ರಲ್ಲೂ ಸಿದ್ದರಾಮಯ್ಯ ಮುಖ್ಯಮಂತ್ರಿ ಎಂದು ಹೈಕಮಾಂಡ್ ಹೇಳಿತ್ತು. ಅಧಿಕಾರದ ಅವಧಿ 2028ರವರೆಗೆ ಇದೆ. ಅದನ್ನು ಪೂರ್ಣಗೊಳಿಸಬೇಕು ತಾನೆ? ನೀವೇ 5 ವರ್ಷವೂ ಸಿಎಂ ಎಂದು ಹೈಕಮಾಂಡ್‌ ಪ್ರತ್ಯೇಕವಾಗಿ ಸ್ಪಷ್ಟೀಕರಣ ನೀಡುವ ಅಗತ್ಯವಿಲ್ಲ ಎಂದು ಹೇಳಿದರು.

ಹೈಕಮಾಂಡ್‌ನಿಂದ ಯಾವ ಗೊಂದಲವೂ ಇಲ್ಲ. ಇನ್ನೂ ಹೈಕಮಾಂಡ್ ಯಾವಾತ್ತಾದ್ರೂ ಸಿದ್ದರಾಮಯ್ಯ ಅವರ ಅಧಿಕಾರದ ಅವಧಿ ಇಂತಿಷ್ಟೆಂದು ಹೇಳಿದೆಯೇ. ಬದಲಾವಣೆ ಬಗ್ಗೆ ಮಾತನಾಡಿದೆಯೇ? ಅದರರ್ಥ ಆ ರೀತಿಯ ಯಾವ ಬೆಳವಣಿಗೆಯೂ ಇಲ್ಲ ಎಂದೇ ಎಂದರು.    

ಮುಖ್ಯಮಂತ್ರಿ ಸ್ಥಾನ ಬದಲಾವಣೆ ಮಾಡಬೇಕಾಗಿರುವುದು ಹೈಕಮಾಂಡ್. ಆ ಬಗ್ಗೆ ಎಂದಾದರೂ ಮಾತನಾಡಿದ್ದರೆ ಅದಕ್ಕೊಂದು ಅರ್ಥ ಬರುತ್ತಿತ್ತು. ಬರುತ್ತಿರುವ ಹೇಳಿಕೆ ಅವರದ್ದು ವೈಯಕ್ತಿಕ ಎಂದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ