ಗೃಹಲಕ್ಷ್ಮಿ ಹಣದಿಂದ ಫೀಸ್ ಕಟ್ಟಿದ ಬಿಇಎಡ್ ವಿದ್ಯಾರ್ಥಿ: ಸಿದ್ದರಾಮಯ್ಯ ಪ್ರತಿಕ್ರಿಯೆ ನೋಡಿ

Krishnaveni K

ಶನಿವಾರ, 19 ಅಕ್ಟೋಬರ್ 2024 (14:35 IST)
ಬೆಂಗಳೂರು: ಗೃಹಲಕ್ಷ್ಮಿ ಹಣದಿಂದ ಅನುಕೂಲವಾದ ಬಗ್ಗೆ ಕೆಲವೊಂದು ಘಟನೆಗಳು ಕೇಳಿಬರುತ್ತಲೇ ಇವೆ. ಇದೀಗ ಮತ್ತೊಂದು ಅಂತಹದ್ದೇ ಘಟನೆ ನಡೆದಿದೆ. ಗೃಹಲಕ್ಷ್ಮಿ ಹಣದಿಂದ ಬಿಇಎಡ್ ವಿದ್ಯಾರ್ಥಿ ಫೀಸ್ ಕಟ್ಟಿದ ವಿಚಾರ ಈಗ ಸಿಎಂ ಸಿದ್ದರಾಮಯ್ಯವರೆಗೆ ತಲುಪಿದೆ.

ಬಿಇಎಡ್ ವಿದ್ಯಾರ್ಥಿಯೊಬ್ಬರು ಗೃಹಲಕ್ಷ್ಮಿ ಹಣದಿಂದ ತಮ್ಮ ಫೀಸ್ ಪಾವತಿಸಲು ಸಹಾಯವಾಯಿತು. ಕುಟುಂಬ ಸಾಲದ ಸುಳಿಯಲ್ಲಿತ್ತು. ತಂದೆ ಬಳಿ ಹಣ ಕೇಳೋಕೆ ಆಗದೇ ತಾಯಿ ಉಳಿಸಿಟ್ಟಿದ್ದ ಗೃಹಲಕ್ಷ್ಮಿ ಹಣದಿಂದ ಫೀಸ್ ಕಟ್ಟಿದೆ. ಸಿಎಂ ಸಿದ್ದರಾಮಯ್ಯ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೆ ಧನ್ಯವಾದ ಎಂದು ಸಿಎಂಗೆ ಟ್ವೀಟ್ ಮಾಡಿದ್ದರು.

ಇದು ಸಿಎಂ ಸಿದ್ದರಾಮಯ್ಯ ಗಮನಕ್ಕೆ ಬಂದಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಬಡತನದ ಕಾರಣಕ್ಕಾಗಿ ಶಿಕ್ಷಣ ವಂಚಿತರಾಗಿರುವ ಮಕ್ಕಳನ್ನು ನನ್ನ ಬಾಲ್ಯದಿಂದಲೂ ನೋಡುತ್ತಾ ಬಂದಿದ್ದೇನೆ, ಇಂದಿಗೂ ನಮ್ಮ ನಡುವೆ ಅಂತಹಾ ಉದಾಹರಣೆಗಳು ಸಾಕಷ್ಟು ಸಿಗಲಿವೆ. ಸ್ವತಃ ನಾನೇ ನನ್ನಿಷ್ಟದ ಕಾನೂನು ವ್ಯಾಸಂಗಕ್ಕಾಗಿ ನಡೆಸಿದ ಹೋರಾಟ ಈ ಕ್ಷಣ ನೆನಪಾಗುತ್ತಿದೆ.

ಅಂದು ಯಾವುದೋ ಕಾರಣಕ್ಕೆ ಶಿಕ್ಷಣ ಮೊಟಕುಗೊಳಿಸಿ, ಕೃಷಿಯಲ್ಲಿ ತೊಡಗಿಕೊಂಡಿದ್ದರೆ ಇಂದು ಮುಖ್ಯಮಂತ್ರಿಯಾಗಿ ಕೋಟ್ಯಂತರ ಕನ್ನಡಿಗರ ಸೇವೆ ಮಾಡುವ ಭಾಗ್ಯ ನನ್ನದಾಗುತ್ತಿರಲಿಲ್ಲ. ಬಡತನದಲ್ಲೂ ಕಲಿಕೆಯೆಡೆಗಿನ ಈ ಯುವಕನ ಹಂಬಲ ಕಂಡು ನನಗೆ ಖುಷಿಯಾಯಿತು. ಗೃಹಲಕ್ಷ್ಮಿ ಯೋಜನೆ ನಿಜವಾಗಿ ತಲುಪಬೇಕಿರುವುದು ಮತ್ತು ತಲುಪುತ್ತಿರುವುದು ಇಂತಹ ಜನರನ್ನೆ.

ತನಗೆ ಬಂದ ಗೃಹಲಕ್ಷ್ಮಿಯ ಹಣವನ್ನು ಕಡುಬಡತನದಲ್ಲೂ ಕೂಡಿಟ್ಟು ಮಗನ ಶಿಕ್ಷಣಕ್ಕಾಗಿ ಕೊಟ್ಟ ಆ ತಾಯಿಯ ಪ್ರೀತಿ - ಕಾಳಜಿಗೆ ಧನ್ಯವಾದ. ಬಿ.ಇಡಿ ಶಿಕ್ಷಣ ಮುಗಿಸಿ ಶಿಕ್ಷಕನಾಗಿ ನೂರಾರು ಮಕ್ಕಳ ಬದುಕು ರೂಪಿಸುವಂತಾಗು. ಇಂದು ನೀನು ಧನ್ಯವಾದ ತಿಳಿಸಿದ್ದಕ್ಕಿಂತ ಹೆಚ್ಚು ಖುಷಿ ಅಂದು ನನಗಾಗಲಿದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ