ಬೆಂಗಳೂರು: ಸಿದ್ದರಾಮಯ್ಯರಿಗೆ ಚಾಮುಂಡೇಶ್ವರಿ ಆಶೀರ್ವಾದ ಇರಬಹುದು. ಆದರೆ, ಕೋರ್ಟಿನ, ಲೋಕಾಯುಕ್ತದ, ಸಿಬಿಐ ಆಶೀರ್ವಾದ ಇದೆಯೇ ಎಂದು ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಪ್ರಶ್ನಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಮುಡಾ ಹಗರಣವನ್ನು ಸಿಬಿಐ ತನಿಖೆಗೆ ಕೊಡಬೇಕೆಂದು ನಾವು ಕೇಳುತ್ತಿದ್ದೇವೆ. ಸಿದ್ದರಾಮಯ್ಯ ಅವರು 100ಕ್ಕೆ ನೂರು ತಪ್ಪು ಮಾಡಿದ್ದು ಎಲ್ಲರಿಗೂ ಗೊತ್ತಾಗುತ್ತಿದೆ. ಆದರೆ, ಸಿದ್ದರಾಮಯ್ಯ ಅವರು ನಾನೇನೂ ತಪ್ಪು ಮಾಡಿಲ್ಲ. ಚಾಮುಂಡೇಶ್ವರಿ ಆಶೀರ್ವಾದ ನನಗಿದೆ ಅಂತ ಹೇಳುತ್ತಿದ್ದಾರೆ ಎಂದರು.
ಕೋರ್ಟಿನ ಆದೇಶದ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಮತ್ತು ಕಾನೂನಿನ ಪರಿಧಿಯಲ್ಲೂ ಸಿದ್ದರಾಮಯ್ಯ ಅವರು 100ಕ್ಕೆ ನೂರು ತಪ್ಪು ಮಾಡಿ ಸಿಕ್ಕಿ ಹಾಕಿಕೊಂಡಿದ್ದು ಜಗಜ್ಜಾಹೀರಾಗಿದೆ. ಇಂಥದ್ದೇ ಪ್ರಕರಣದಲ್ಲಿ ಬಿಜೆಪಿ ನಾಯಕರು ಸಿಕ್ಕಿ ಹಾಕಿಕೊಂಡಿದ್ದರೆ ಸಿದ್ದರಾಮಯ್ಯ ಅವರು ಯಾವ ರೀತಿ ಮಾತಿನ ದಾಳಿ ಮಾಡುತ್ತಿದ್ದರು ಎಂಬುದನ್ನು ಜನರು ಕಲ್ಪನೆ ಮಾಡುವುದಕ್ಕೂ ಅಸಾಧ್ಯ ಎಂದು ತಿಳಿಸಿದರು.