ಬೆಂಗಳೂರು: ಲೋಕಸಭೆ ಚುನಾವಣೆಗೆ ಕೆಲವೇ ದಿನಗಳ ಮೊದಲು ಸಿಎಂ ಸಿದ್ದರಾಮಯ್ಯ ನಾಳೆ ಕರ್ನಾಟಕ ಬಜೆಟ್ ಮಂಡಿಸಲಿದ್ದಾರೆ. ಚುನಾವಣೆ ದೃಷ್ಟಿಯಿಂದ ಕೆಲವು ಆಕರ್ಷಕ ಯೋಜನೆಗಳ ನಿರೀಕ್ಷೆಯಲ್ಲಿ ಜನರಿದ್ದಾರೆ.
ರಾಜ್ಯದ ಪರ ಅತಿ ಹೆಚ್ಚು ಬಜೆಟ್ ಮಂಡಿಸಿರುವ ಖ್ಯಾತಿ ಹೊಂದಿರುವ ಸಿಎಂ ಸಿದ್ದರಾಮಯ್ಯ, ಮತ್ತೊಂದು ಬಜೆಟ್ ಮಂಡಿಸಲಿದ್ದಾರೆ. ಫೆಬ್ರವರಿ 16 ರಂದು ಅಂದರೆ ನಾಳೆ 10.15 ಕ್ಕೆ ಸಿಎಂ ಸಿದ್ದು ಬಜೆಟ್ ಮಂಡಿಸಲಿದ್ದಾರೆ. ರಾಹುಕಾಲ ಶುರುವಾಗುವ 15 ನಿಮಿಷ ಮೊದಲು ಬಜೆಟ್ ಮಂಡನೆ ಶುರು ಮಾಡಲಿದ್ದಾರೆ. ನಾಳೆ 10.30 ರಿಂದ 12.30 ರವರೆಗೆ ರಾಹು ಕಾಲವಿದೆ. ಹೀಗಾಗಿ 10.15 ಕ್ಕೇ ಬಜೆಟ್ ಮಂಡನೆ ಶುರು ಮಾಡಲಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ಪಾಲಿಗೆ ಇದು ದಾಖಲೆಯ 15 ನೇ ಬಜೆಟ್ ಆಗಿರಲಿದೆ. ಈ ಬಾರಿ ಬಜೆಟ್ 3.80 ಲಕ್ಷ ಕೋಟಿ ರೂ. ತಲುಪುವ ನಿರೀಕ್ಷೆಯಿದೆ. ಆದರೆ ಪಂಚ ಗ್ಯಾರಂಟಿಯಿಂದಾಗಿ ರಾಜ್ಯದ ಆದಾಯದ ಮೇಲೂ ಕೊಂಚ ಹೊಡೆತ ಬಿದ್ದಿದ್ದು ಇದನ್ನು ಸರಿದೂಗಿಸುವುದು ಸರ್ಕಾರಕ್ಕೆ ಸವಾಲಾಗಿದೆ.
ಲೋಕಸಭೆ ಚುನಾವಣೆಗೆ ಇನ್ನು ಕೆಲವೇ ದಿನಗಳು ಬಾಕಿಯಿರುವುದರಿಂದ ಮತದಾರರನ್ನು ಸೆಳೆಯುವ ಉದ್ದೇಶದಿಂದ ಕೆಲವೊಂದು ಜನಪ್ರಿಯ ಯೋಜನೆಗಳನ್ನು ಜಾರಿಗೆ ತರುವ ಸಾಧ್ಯತೆಯಿದೆ. ಈ ಸಾಲಿನಲ್ಲಿ 58,000 ಕೋಟಿ ರೂ. ಗ್ಯಾರಂಟಿಗಳಿಗಾಗಿ ಮೀಸಲಿಡಬೇಕಾಗುತ್ತದೆ. ಹಳೆ ಮೈಸೂರು, ಕಲ್ಯಾಣ ಕರ್ನಾಟಕ, ಕರಾವಳಿ ಕರ್ನಾಟಕ, ಮಧ‍್ಯಕರ್ನಾಟಕಕ್ಕೆ ಹೆಚ್ಚಿನ ಕೊಡುಗೆ ಸಿಗುವ ನಿರೀಕ್ಷೆಯಿದೆ. ಚುನಾವಣೆ ದೃಷ್ಟಿಯಿಂದ ಜನಪ್ರಿಯ ಬಜೆಟ್ ಇದಾಗಬಹುದು ಎಂಬ ನಿರೀಕ್ಷೆಯಿದೆ.