ಮೈಸೂರು: ಚಾಮುಂಡೇಶ್ವರಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿರುವ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮೈಸೂರು ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಸಿಡಿದೆದ್ದಿದ್ದು ಕೋರ್ಟ್ ಮೆಟ್ಟಿಲೇರಿದ್ದಾರೆ.
ಅಂದ ಹಾಗೆ ಸಿದ್ದರಾಮಯ್ಯ ಮತ್ತು ಪ್ರಮೋದಾ ದೇವಿ ಒಡೆಯರ್ ನಡುವಿನ ಗುದ್ದಾಟ ಇದೇ ಮೊದಲಲ್ಲ. ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಮೈಸೂರು ರಾಜಮನೆತನದ ಜೊತೆ ಅವರ ತಿಕ್ಕಾಟ ನಡೆಯುತ್ತಲೇ ಇತ್ತು. ಇದೀಗ ಚಾಮುಂಡೇಶ್ವರಿ ದೇವಸ್ಥಾನದ ಆಡಳಿತದಲ್ಲಿ ರಾಜಮನೆತನದ ಅಧಿಕಾರಕ್ಕೆ ಬ್ರೇಕ್ ಹಾಕಲು ಸಿದ್ದು ಸರ್ಕಾರ ಪ್ರಾಧಿಕಾರ ರಚಿಸಿದೆ ಎಂಬುದು ಪ್ರಮೋದಾ ದೇವಿ ಆರೋಪ.
ಇದೇ ಕಾರಣಕ್ಕೆ ಅವರೀಗ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದೆ. ಹೈಕೋರ್ಟ್ ಈಗ ಇದಕ್ಕೆ ತಾತ್ಕಾಲಿಕ ತಡೆ ನೀಡಿದೆ. ಇದರ ಬೆನ್ನಲ್ಲೇ ಪ್ರಮೋದಾ ದೇವಿ ಪತ್ರಿಕಾಗೋಷ್ಠಿ ನಡೆಸಿ ರಾಜಮನೆತನದ ವಿರುದ್ಧ ರಾಜ್ಯ ಸರ್ಕಾರ ಬೇಕೆಂದೇ ಇಂತಹದ್ದೊಂದು ಮಸಲತ್ತು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಈ ಹಿಂದೆ ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೂ ಒಮ್ಮೆ ಮೈಸೂರು ಅರಮನೆ ಆಸ್ತಿಯನ್ನು ಸಂಪೂರ್ಣವಾಗಿ ಸರ್ಕಾರದ ವಶ ಮಾಡಿಕೊಳ್ಳಲು ಯತ್ನಿಸಿದ್ದರು ಎಂಬ ಆರೋಪವಿತ್ತು. ಆಗಲೂ ಪ್ರಮೋದಾ ದೇವಿ ಸಿಡಿದೆದ್ದಿದ್ದರು. ಅದಲ್ಲದೆ, ರಾಜಮನೆತನದ ಆಡಳಿತ ನಂತರ ರಾಜ್ಯದಲ್ಲಿ ನಮ್ಮದೇ ಶ್ರೇಷ್ಠ ಆಡಳಿತ ಎಂದು ಸಿದ್ದರಾಮಯ್ಯ ಹೊಗಳಿಕೊಂಡಿದ್ದು ಪ್ರಮೋದಾ ದೇವಿ ಕೆಂಗಣ್ಣಿಗೆ ಗುರಿಯಾಗಿತ್ತು. ಇದೀಗ ಮತ್ತೊಮ್ಮೆ ರಾಜಮಾತೆ ವರ್ಸಸ್ ಸಿದ್ದರಾಮಯ್ಯ ವಾರ್ ಶುರುವಾಗಿದೆ.