ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಡಿಕೆಶಿಯನ್ನು ಮುಖ್ಯಮಂತ್ರಿಯಾಗಲು ಬಿಡಲ್ಲ: ಭಗವಂತ್ ಖೂಬಾ
ಮಂಗಳವಾರ, 20 ಜೂನ್ 2023 (10:14 IST)
ಬೀದರ್ : ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿಯಾಗಲು ಬಿಡುವುದಿಲ್ಲ. ಜೊತೆಗೆ ಲೋಕಸಭಾ ಚುನಾವಣೆಯ ಬಳಿಕ ಈ ಸರ್ಕಾರದಲ್ಲಿ ಅಸ್ಥಿರತೆಯ ವಾತಾವರಣ ನಿರ್ಮಾಣವಾಗಲಿದೆ ಎಂದು ಕೇಂದ್ರ ಸಚಿವ ಭಗವಂತ್ ಖೂಬಾ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೀದರ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನನಗೆ 5 ವರ್ಷದ ಸಲುವಾಗಿ ರಾಜ್ಯದ ಜನತೆ ಆಯ್ಕೆ ಮಾಡಿದ್ದಾರೆ, ನಾನು ಮುಖ್ಯಮಂತ್ರಿಯಾಗಿ ಇರುತ್ತೇನೆ ಎಂದು ಸಿದ್ದರಾಮಯ್ಯನವರು ಸ್ಪಷ್ಟವಾಗಿ ಹೇಳಬೇಕು.
ಇಲ್ಲವಾದರೆ ಇಬ್ಬರ ಮಧ್ಯ ಅಧಿಕಾರ ಹಂಚಿಕೆಯಾಗಿದೆ ಎಂದು ಸಿಎಂ ಹೇಳಲಿ ಎಂದು ಸಿದ್ದರಾಮಯ್ಯನವರಿಗೆ ಸವಾಲು ಹಾಕಿದರು. ಅಲ್ಲದೇ ಡಿಕೆ ಶಿವಕುಮಾರ್ ಸಿದ್ದರಾಮಯ್ಯ ಅವರನ್ನು ಎಷ್ಟು ದಿನ ಸಿಎಂ ಆಗಿ ಇರಲು ಬಿಡುತ್ತೀರಿ ಎಂದು ಹೇಳಬೇಕು. ಇಬ್ಬರ ಮಧ್ಯೆ ಯಾವ ರೀತಿಯ ಒಪ್ಪಂದ ಆಗಿದೆ ಎಂದು ಸಾರ್ವಜನಿಕವಾಗಿ ಹೇಳಬೇಕು ಎಂದು ಒತ್ತಾಯಿಸಿದರು.
ಸಿಎಂ ಸಿದ್ದರಾಮಯ್ಯ ಅಕ್ಕಿಗಾಗಿ ಕೇಂದ್ರದ ಕಡೆ ಬೊಟ್ಟು ಮಾಡಿ ತಮ್ಮ ವೈಫಲ್ಯಗಳನ್ನು ಮುಚ್ಚಿಕೊಳ್ಳುವ ನೇತಾರ. 5 ಗ್ಯಾರಂಟಿಗಳ ಮೂಲಕ ಷರತ್ತುಗಳು ಇಲ್ಲದೆ ಗ್ಯಾರಂಟಿ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಅವರಿಗೆ ಗೊತ್ತಾಗಿದೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅವರಿಗೆ ಬದ್ಧತೆ ಇದ್ದರೆ ಅಕ್ಕಿಗಾಗಿ ಕೇಂದ್ರದ ಕಡೆ ಬೊಟ್ಟು ಮಾಡುವುದನ್ನು ಬಿಡಿ ಎಂದು ಚಾಟಿ ಬೀಸಿದರು.