ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಅಕ್ಕಿ ಗಲಾಟೆ ಮಧ್ಯೆ ರಾಜ್ಯ ಸರ್ಕಾರ ಹೆಚ್ಚುವರಿ ಅಕ್ಕಿ ಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ. ತೆಲಂಗಾಣ, ಛತ್ತೀಸ್ಗಢ ಎರಡು ರಾಜ್ಯದ ಜೊತೆ ಅಕ್ಕಿಗಾಗಿ ಮಾತುಕತೆ ಮುಂದುವರಿದಿದ್ದು ಇನ್ನೂ ಅಂತಿಮವಾಗಿ ಅಕ್ಕಿ ಎಲ್ಲಿಂದ ತರಬೇಕು ಎಂಬುದಕ್ಕೆ ಇನ್ನೂ ಸರ್ಕಾರಕ್ಕೆ ಕ್ಲಾರಿಟಿ ಸಿಕ್ಕಿಲ್ಲ.
ಹೌದು. ಕಾಂಗ್ರೆಸ್ ಸರ್ಕಾರಕ್ಕೆ ಕೊಟ್ಟ ಮಾತಿನಂತೆ ಜುಲೈನಲ್ಲಿ ಉಚಿತವಾಗಿ 10 ಕೆಜಿಯನ್ನು ಒದಗಿಸುವ ಸಲುವಾಗಿ ಎಲ್ಲಾ ರೀತಿಯ ಕಸರತ್ತು ನಡೆಸ್ತಿದೆ. ಕೇಂದ್ರ ಸರ್ಕಾರ ನಾವು ಮಾರಾಟ ಮಾಡಲ್ಲ ಎನ್ನುತ್ತಿದೆ. ಶತಾಯಗತಾಯ ಎಲ್ಲಿಂದಲಾದರೂ ಹೆಚ್ಚುವರಿ ಅಕ್ಕಿ ತಂದು 10 ಕೆ.ಜಿ ಅಕ್ಕಿ ಕೊಡಲೇಬೇಕು ಎಂಬ ಹಠಕ್ಕೆ ರಾಜ್ಯ ಸರ್ಕಾರ ಬಿದ್ದಂತಿದೆ. ಇದರಿಂದಾಗಿ ಅನ್ಯ ರಾಜ್ಯಗಳಿಂದ ಅಕ್ಕಿ ಖರೀದಿಸಲು ಸಿದ್ದರಾಮಯ್ಯ ಸರ್ಕಾರ ಯತ್ನಿಸ್ತಿದೆ.
ತೆಲಂಗಾಣದಲ್ಲಿ ರಾಜ್ಯ ಸರ್ಕಾರ ಕೇಳಿದಷ್ಟು ಅಕ್ಕಿ ಸ್ಟಾಕ್ ಇಲ್ಲಾ ಎನ್ನಲಾಗಿದೆ. ಇನ್ನು ಛತ್ತೀಸ್ಗಢದಲ್ಲಿ ಅಕ್ಕಿ ಇದ್ದರೂ ದುಬಾರಿ ಬೆಲೆ ತೆತ್ತು ಅಕ್ಕಿ ತರಬೇಕಿದೆ. ಛತ್ತೀಸ್ಘಡ ಸರ್ಕಾರ 1.5 ಲಕ್ಷ ಮೆಟ್ರಿಕ್ ಟನ್ ಅಕ್ಕಿ ಕೊಡಲು ಒಪ್ಪಿದೆ. ಆದರೆ ಇದು ಸಾಕಾಗಲ್ಲ, ಉಚಿತ ಅಕ್ಕಿ ವಿತರಣೆಗೆ 2.28 ಲಕ್ಷ ಮೆಟ್ರಿಕ್ ಅಗತ್ಯವಿದೆ. ಹೀಗಾಗಿ ನೆರೆಯ ಆಂಧ್ರ ಸರ್ಕಾರವನ್ನು ಸಿದ್ದರಾಮಯ್ಯ ಸರ್ಕಾರ ಸಂಪರ್ಕಿಸಿದ್ದು, ಮಾತುಕತೆ ನಡೆಸ್ತಿದೆ. ಒಟ್ಟಾರೆ ಅನ್ನ ಭಾಗ್ಯದ ಅಕ್ಕಿಗಾಗಿ ರಾಜ್ಯ ಸರ್ಕಾರ ಒತ್ತಡಕ್ಕೆ ಸಿಲುಕಿದಂತೆ ಕಾಣುತ್ತಿದೆ.