ಕಳೆದ ಆರು ವರ್ಷಗಳಿಂದಲೂ ರಾಜ್ಯದಲ್ಲಿ ಬರಗಾಲವಿದೆ. ಅದರಲ್ಲಿಯೂ ಕಳೆದ ವರ್ಷ ಹಾಗೂ ಈ ವರ್ಷ ರಾಜ್ಯದಲ್ಲಿ ಬರದ ತೀವ್ರತೆ ಅತ್ಯಂತ ಕೆಟ್ಟದಾಗಿದೆ. ಬರ ಸ್ಥಿತಿಯಿಂದ ರಾಜ್ಯದಲ್ಲಿ 25,000 ಕೋಟಿ ರೂ ಗಳಿಗೂ ಹೆಚ್ಚು ಮೌಲ್ಯದ ಬೆಳೆ ನಷ್ಟ ಉಂಟಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ರಾಜ್ಯದಲ್ಲಿ ಮುಂಗಾರು ವೈಫಲ್ಯದ ಹಿನ್ನೆಲೆಯಲ್ಲಿ ಪರಿಹಾರ ಕೋರಿ 4702 ಕೋಟಿ ರೂ ಮನವಿ ಸಲ್ಲಿಸಲಾಗಿದೆ. ರಾಜ್ಯಕ್ಕೆ ಭೇಟಿ ನೀಡಿ ಪರಿಶೀಲಿಸಿದ ಕೇಂದ್ರ ತಂಡ ಗೃಹ ಮಂತ್ರಾಲಯದ ವಿಪತ್ತು ನಿರ್ವಹಣಾ ಕೋಶಕ್ಕೆ ಈಗಾಗಲೇ ತನ್ನ ವರದಿ ಸಲ್ಲಿಸಿದೆ. ಕೇಂದ್ರ ಸರ್ಕಾರವು 1782.44 ಕೋಟಿ ರೂ ಅನುದಾನ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದೆ. ಆದರೆ, ಈವರೆಗೂ ಯಾವುದೇ ಅನುದಾನ ರಾಜ್ಯ ಸರ್ಕಾರಕ್ಕೆ ಬಂದಿಲ್ಲ. ಆದರೆ, ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿರುವುದಕ್ಕೆ ಚಕಾರ ಎತ್ತದ ಪ್ರತಿಪಕ್ಷಗಳು ಈ ಹಿಂದೆ ಬಿಡುಗಡೆಯಾದ ಅನುದಾನವೇ ಬಳಕೆಯಾಗಿಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳು ಸ್ಪಷ್ಟೀಕರಣ ನೀಡದೆ ಮೌನ ವಹಿಸುತ್ತಿರುವುದೇಕೆ ? ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಮುಖ್ಯಮಂತ್ರಿಯವರು ಕೂಡಲೇ ಸ್ಪಷ್ಟೀಕರಣ ನೀಡಿ ಎಂದರು.