ಧಾರಾಕಾರ ಮಳೆಗೆ ಸಿಲಿಕಾನ್ ಸಿಟಿ ತತ್ತರ
ಸತತ ಎರಡನೇ ದಿನ ಬೆಂಗಳೂರು ನಗರದಲ್ಲಿ ಬಿರುಸಿನ ಬೇಸಿಗೆ ಮಳೆಯಾಗಿದೆ. ರಾತ್ರಿ 7.30ರ ಸುಮಾರಿಗೆ ಪ್ರಾರಂಭಗೊಂಡ ಗುಡುಗು ಮತ್ತು ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ನಗರದ ಹಲವೆಡೆ ಮರ ಬಿದ್ದ, ಕೊಂಬೆ ಮುರಿದ ಪ್ರಕರಣಗಳು ವರದಿಯಾಗಿವೆ. ಹಲವು ತಗ್ಗು ಪ್ರದೇಶಗಳಲ್ಲಿ ಇರುವ ಬಡಾವಣೆಗಳಲ್ಲಿ ನೀರು ನಿಂತ ದೂರು ದಾಖಲಾಗಿದೆ. ಉತ್ತರಹಳ್ಳಿಯ ಹೇಮಾವತಿ ವಾಟರ್ ಸಪ್ಲೈ ಬಡಾವಣೆಯಲ್ಲಿ ನೀರು ನುಗ್ಗಿ ಹತ್ತಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದೆ.. ಕಾಮಾಕ್ಯ ಲೇಔಟ್ನಲ್ಲಿ 20-30 ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿದ್ದ ಅಕ್ಕಿ, ಬೇಳೆ ಸೇರಿ ದಿನಬಳಕೆ ವಸ್ತುಗಳು ಹಾಳಾಗಿವೆ..ಇನ್ನು, ನಗರದ ಬಸವನಗುಡಿ, ಚಾಮರಾಜಪೇಟೆ, ಬನ್ನೇರುಘಟ್ಟ ರಸ್ತೆ, ಯಶವಂತಪುರದಲ್ಲಿ ಬೃಹತ್ ಗಾತ್ರದ ಮರಗಳು ಉರುಳಿ ಬಿದ್ದಿವೆ. ಅನೇಕ ಕಡೆ ಮರದ ಕೊಂಬೆಗಳು ಮುರಿದಿದ್ದು, ಅಂಡರ್ ಪಾಸ್‌ಗಳಲ್ಲಿ ಮತ್ತು ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತೆ ಆಯಿತು.