ಚಾಮುಂಡೇಶ್ವರಿಯಲ್ಲಿ ಸಿಎಂ ಪ್ರತಿಸ್ಪರ್ಧಿ ಡಾ.ವಿದ್ಯಾಭೂಷಣ: ಸಿಎಂ ಮಣಿಸಲು ಬಿಜೆಪಿ ಪ್ಲಾನ್

ಶನಿವಾರ, 4 ನವೆಂಬರ್ 2017 (18:53 IST)
ಮೈಸೂರು: ಈ ಬಾರಿ ಸಿಎಂ ಸಿದ್ದರಾಮಯ್ಯ ವರುಣಾ ಬದಲು ಚಾಮುಂಡೇಶ್ವರಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಾರೆ. ಹೀಗಾಗಿ ಅವರ ಎದುರಾಳಿಯನ್ನು ಪಣಕ್ಕಿಡಲು ಬಿಜೆಪಿ ಮುಂದಾಗಿದೆ ಎಂಬ ಗಾಳಿ ಮಾತು ಎಲ್ಲೆಡೆ ಹರಿದಾಡುತ್ತಿದೆ.

ಸಿದ್ದರಾಮಯ್ಯರನ್ನು ಶತಾಯ–ಗತಾಯ ಸೋಲಿಸಬೇಕೆಂದು ಜೆಡಿಎಸ್ ತೊಡೆ ತಟ್ಟಿ ಕಾರ್ಯತಂತ್ರ ರೂಪಿಸುತ್ತಿದೆ. ಇತ್ತ ಬಿಜೆಪಿ ಡಾ. ವಿದ್ಯಾಭೂಷಣರನ್ನ ಕಣಕ್ಕಿಳಿಸಲು ರಣತಂತ್ರ ಹೆಣೆದಿದೆ ಎಂದು ಸುದ್ದಿವಾಹಿನಿಗಳು ವರದಿ ಮಾಡಿವೆ.

ಒಂದು ಕಾಲದಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮಠಾಧೀಶರಾಗಿದ್ದ ಇವರು ಸದ್ಯ ಗೃಹಸ್ಥಾಶ್ರಮದಲ್ಲಿದ್ದಾರೆ. ಅಲ್ಲದೆ ಉಡುಪಿ ಅಷ್ಟಮಠಗಳು ಸೇರಿದಂತೆ ರಾಜ್ಯದ ಪ್ರಮುಖ ಮಠಗಳ ಸ್ವಾಮೀಜಿಗಳ ಜತೆ ಉತ್ತಮ ಸಂಬಂಧ ಹೊಂದಿದ್ದಾರೆ. ವಿದ್ಯಾಭೂಷಣರು ಹಾಡುಗಾರರೂ ಹೌದು. ದಾಸರ ಪದಗಳ ಮೂಲಕ ರಾಜ್ಯದ ಮನೆ ಮನೆಯಲ್ಲೂ ಪ್ರಸಿದ್ಧಿ ಪಡೆದಿದ್ದಾರೆ. ವಿದ್ಯಾಭೂಷಣರು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಹೆಚ್. ಡಿ.ದೇವೇಗೌಡರೊಂದಿಗೂ ಹೆಚ್ಚಿನ ಒಡನಾಟ ಹೊಂದಿದ್ದಾರೆ.

ಇದರ ಮಾಸ್ಟರ್ ಪ್ಲಾನ್ ಅರಿತ ಬಿಜೆಪಿ ಪಾಳಯ ವಿದ್ಯಾಭೂಷಣರನ್ನ ಕಣಕ್ಕಿಳಿಸಿದರೆ ಜೆಡಿಎಸ್ ಪ್ರತಿಸ್ಫರ್ಧಿ ನಿಲ್ಲಿಸುವುದಿಲ್ಲ ಎನ್ನುವುದನ್ನ ಅರಿತ ಬೆನ್ನಲ್ಲೇ ಈ ಯೋಜನೆಗೆ ಕೈ ಹಾಕಿದೆ ಎನ್ನಲಾಗಿದೆ. ಅಂದಹಾಗೆ ಈ ಬಗ್ಗೆ ಮಾತುಕತೆ ಕೂಡ ನಡೆಸಲಾಗಿದ್ದು, ಮಾತುಕತೆ ಫಲಪ್ರದವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ವಿದ್ಯಾಭೂಷಣರು ಕಣಕ್ಕಿಳಿಯುವ ಬಗ್ಗೆ ತಮ್ಮ ಗುರುಗಳಾದ ಪೇಜಾವರ ಶ್ರೀಗಳ ಸಲಹೆ ಕೇಳಿದ್ದಾರೆ ಎನ್ನಲಾಗಿದೆ. ಬಿಜೆಪಿ ಮುಖಂಡರು ಸಹ ಪೇಜಾವರ ಶ್ರೀಗಳ ಮನವೊಲಿಕೆಯಲ್ಲಿ ತೊಡಗಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಈ ಬಾರಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಚುನಾವಣೆ ಜಿದ್ದಾ–ಜಿದ್ದಿನಿಂದ ಕೂಡಿದ್ದು, ಇಡೀ ರಾಷ್ಟ್ರದ ಚಿತ್ತ ಇತ್ತ ನೆಟ್ಟಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ