ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್‌ಡ್ರೈವ್ ಪ್ರಕರಣವು ದಿನೇ ದಿನೆ ಹೊಸ ತಿರುವು ಪಡೆಯುತ್ತಿದೆ. ಇಂದು ಮಧ್ಯಾಹ್ನ ಮೂರು ಗಂಟೆಗೆ ಪ್ರಜ್ವಲ್ ವಿದೇಶದಿಂದ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಂತ್ರಸ್ತೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್ ಅವರ ತಂದೆ, ಶಾಸಕ ಎಚ್.ಡಿ. ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ. ಅದರ ಬೆನ್ನಲ್ಲೇ ಪ್ರಜ್ವಲ್ ಬಂಧನ ಸಾಧ್ಯತೆ ದಟ್ಟವಾಗಿದೆ.
ರೇವಣ್ಣ ಬಂಧನವಾಗುತ್ತಿದ್ದಂತೆ ಪ್ರಜ್ವಲ್ ಅವರನ್ನು ಭಾರತಕ್ಕೆ ಬರುವಂತೆ ಜೆಡಿಎಸ್ ಮುಖಂಡರು ಮನವೊಲಿಸಿದ್ದು, ಅವರು ಇಂದು ಬೆಂಗಳೂರಿನ ಕೆಂಪೇಗೌಡ ಏರ್‌ಪೋರ್ಟ್‌ಗೆ ಬರುವ ಸಾಧ್ಯತೆ ದಟ್ಟವಾಗಿದೆ. ಈಗಾಗಲೇ ಏರ್‌ಪೋರ್ಟ್ ಬಳಿ ಬೀಡು ಬಿಟ್ಟಿರುವ ಎಸ್‌ಐಟಿ ಅಧಿಕಾರಿಗಳು ಅಲ್ಲೇ ಪ್ರಜ್ವಲ್ ಅವರನ್ನು ಬಂಧಿಸಲು ಸಿದ್ಧತೆ ನಡೆಸಿದ್ದಾರೆ.
ಪ್ರಜ್ವಲ್ ಯಾವುದೇ ಸಮಯದಲ್ಲಿ ಬೇಕಿದ್ದರೂ ಭಾರತಕ್ಕೆ ಬರಬಹುದು ಎಂಬ ನಿಟ್ಟಿನಲ್ಲಿ ಶನಿವಾರ ರಾತ್ರಿಯಿಂದಲೇ ಏರ್‌ಪೋರ್ಟ್‌ನಲ್ಲಿ ಎಸ್‌ಐಟಿ ತಂಡ ಬೀಡುಬಿಟ್ಟಿದೆ. ಪ್ರಜ್ವಲ್‌ಗಾಗಿ ಎಸ್ಐಟಿ, ಗುಪ್ತಚರ ತಂಡಗಳು ಕಾದು ಕುಳಿತಿದ್ದು, ವಿದೇಶಿ ವಿಮಾನಗಳ ಪ್ಯಾಸೆಂಜರ್ ಲಿಸ್ಟ್ ಅನ್ನು ಪರಿಶೀಲನೆ ನಡೆಸಲಾಗುತ್ತಿದೆ. ವಿದೇಶದಿಂದ ಬರುವ ವಿಮಾನಗಳ ಮೇಲೆ ಹದ್ದಿನ ಕಣ್ಣಿಡಲಾಗಿದೆ.