ಮಂಗಳೂರು: ಧರ್ಮಸ್ಥಳದಲ್ಲಿ ಅನಾಮಿಕ ದೂರುದಾರನ ಬಗ್ಗೆ ಎಸ್ಐಟಿ ತಂಡ ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದೆ. ಅನಾಮಿಕ ದೂರುದಾರ ತಪ್ಪೊಪ್ಪಿಕೊಂಡ ಹಿನ್ನಲೆಯಲ್ಲೇ ಎಸ್ಐಟಿ ಮಹತ್ವದ ನಿರ್ಧಾರ ಮಾಡಿದೆ.
ಅನಾಮಿಕ ಹೇಳಿದಂತೆ ಒಂದು ಪಾಯಿಂಟ್ ಬಿಟ್ಟು ಉಳಿದ ಪಾಯಿಂಟ್ ನಲ್ಲಿ ಅಸ್ಥಿಪಂಜರ ಸಿಕ್ಕಿರಲಿಲ್ಲ. ಹೀಗಾಗಿ ವಿಪಕ್ಷಗಳೂ ಎಸ್ಐಟಿ ತನಿಖೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೇ ಶೋಧ ಕಾರ್ಯಕ್ಕೆ ಬ್ರೇಕ್ ಹಾಕಿದ್ದ ಎಸ್ಐಟಿ ನಿನ್ನೆ ಅನಾಮಿಕ ದೂರುದಾರನನ್ನೇ ವಿಚಾರಣೆಗೊಳಪಡಿಸಿತ್ತು.
ಈ ವೇಳೆ ಆತ 2014 ರಿಂದ ತಾನು ತಮಿಳುನಾಡಿನಲ್ಲಿದ್ದೆ. ಎರಡು ವರ್ಷಗಳ ಹಿಂದೆ ಒಂದು ಗುಂಪು ನನ್ನ ಬಳಿ ಬಂದು ಅಕ್ರಮವಾಗಿ ಶವ ಹೂತಿದ್ದೇನೆ ಎಂದು ಹೇಳಿಕೆ ನೀಡುವಂತೆ ಹೇಳಿತ್ತು. ಅವರ ಬಲವಂತದಿಂದ ನಾನು ದೂರು ನೀಡಲು ಬಂದೆ ಎಂದಿದ್ದ. ಇದು ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ನೀಡಿದೆ.
ಇದರ ಬೆನ್ನಲ್ಲೇ ಈಗ ಅನಾಮಿಕ ದೂರುದಾರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಎಸ್ಐಟಿ ಸಿದ್ಧತೆ ನಡೆಸಿದೆ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರೆ ಹೆಚ್ಚಿನ ವಿಚಾರಗಳು ಹೊರಬರಬಹುದು ಎಂದು ಎಸ್ಐಟಿ ಚಿಂತನೆ ನಡೆಸಿದೆ. ಆದರೆ ಆತ ದೂರುದಾರನಾಗಿರುವುದರಿಂದ ವಶಕ್ಕೆ ಪಡೆಯುವುದಕ್ಕೆ ಕಾನೂನು ತೊಡಕಾಗಬಹುದು. ಹೀಗಾಗಿ ಕೋರ್ಟ್ ಗೆ ವರದಿ ನೀಡಿ ಕೆಲವು ಪ್ರಬಲ ವಿಚಾರಗಳನ್ನು ಮುಂದಿಟ್ಟು ವಶಕ್ಕೆ ಪಡೆಯಬಹುದಾಗಿದೆ.