ಖಾಲಿ ಇರುವ ಹುದ್ದೆಗಳು ಶ್ರೀಘ್ರದಲ್ಲಿ ಭರ್ತಿ: ಪ್ರಭು ಚೌಹಾಣ್

ಶುಕ್ರವಾರ, 6 ಸೆಪ್ಟಂಬರ್ 2019 (15:48 IST)
ಪಶುಸಂಗೋಪನಾ ಇಲಾಖೆಯ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ಇಂದು ಮೊದಲ ಬಾರಿಗೆ, ಸಚಿವರಾದ ಶ್ರೀ ಪ್ರಭು ಚೌಹಾಣ್ ಅವರು ಇಲಾಖೆಯ ಅಡಿಯಲ್ಲಿ ಬರುವ ವಿವಿಧ ಕೇಂದ್ರಗಳಿಗೆ ದಿಢೀರ್ ಭೆಟಿ ನೀಡಿ, ಅಲ್ಲಿನ ಕಾರ್ಯಚಟುವಟಿಕೆಗಳನ್ನು ಪರಿಶೀಲಿಸಿದರು.
ವಿವಿಧ ಕೇಂದ್ರಗಳ ಕಾರ್ಯ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇಲಾಖೆಯಲ್ಲಿ ಹಲವಾರು ಹುದ್ದೆಗಳು ಖಾಲಿ ಇದ್ದು, ಇವುಗಳನ್ನು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಭರ್ತಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಇಲಾಖೆಯ ಕ್ಷೇತ್ರಗಳಲ್ಲಿ ಅತ್ಯುತ್ತಮವಾಗಿ ಸಂವರ್ಧನೆ ಕಾರ್ಯ ನಡೆಯುತ್ತಿದ್ದು, ಅದನ್ನು ಸೂಕ್ತ ರೀತಿಯಲ್ಲಿ ರೈತರಿಗೆ ತಲುಪಿಸಲು ಅತ್ಯುನ್ನತವಾದ ತರಬೇತಿ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಕೆಲಸದಲ್ಲಿ ಯಾವುದೇ ರೀತಿಯ ಕರ್ತವ್ಯ ಲೋಪ ಮತ್ತು ಗೈರು ಹಾಜರಿಯನ್ನು ಸಹಿಸುವುದಿಲ್ಲ. ನಮ್ಮ ಇಲಾಖೆ ರೈತಾಪಿ ವರ್ಗದವರಿಗೆ ಹತ್ತಿರವಿರುವುದರಿಂದ ಅವರಿಗೆ ಅನುಕೂಲವಾಗುವ ರೀತಿಯಲ್ಲಿ ಎಲ್ಲ ತರಹದ ಸಹಾಯವನ್ನು ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಹೈನುಗಾರಿಕೆ ಅಭಿವೃದ್ಧಿಯೊಂದಿಗೆ ಸಮಗ್ರ ಪಶುಪಾಲನೆಗೆ ಹೆಚ್ಚಿನ ಒತ್ತು ಕೊಟ್ಟು ಮೊಲ ಸಾಕಾಣಿಕೆ, ಹಂದಿ ಸಾಕಾಣಿಕೆ, ಕೋಳಿ ಸಾಕಾಣಿಕೆ ಇವುಗಳಿಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಉತ್ತೇಜನ ನೀಡಲಾಗುವುದು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಇಲಾಖೆಯಲ್ಲಿ ದಿನಗೂಲಿ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ಮನವಿ ಮಾಡಿ ತಮ್ಮನ್ನು ಖಾಯಂ ಗೊಳಿಸಲು ಆಗ್ರಹಿಸಿದರು.
ಪಶುಸಂಗೋಪನಾ ಇಲಾಖೆಯ ಹೆಸರಘಟ್ಟದ ಜಾನುವಾರು ಕ್ಷೇತ್ರಗಳಾದ ರಾಜ್ಯ ಜಾನುವಾರು ಸಂವರ್ಧನಾ ಮತ್ತು ತರಬೇತಿ ಕೇಂದ್ರ, ಜಾನುವಾರು ಸಂವರ್ಧನಾ ಕ್ಷೇತ, ರಾಜ್ಯ ಕುಕ್ಕುಟ ಕ್ಷೇತ, ಹಂದಿ ತಳಿ ಸಂವರ್ಧನಾ ಕೇಂದ್ರ, ರಾಜ್ಯ ವೀರ್ಯ ಶೇಖರಣಾ ಕೇಂದ್ರ, ಮೊಲ ಸಾಕಾಣಿಕೆ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
 
ಭೇಟಿಯ ವೇಳೆ ಕ್ಷೇತ್ರ ಜಂಟಿ ನಿರ್ದೇಶಕರಾದ ಡಾ.ಎಚ್.ಎಸ್ ಜಯಣ್ಣ ಮತ್ತು ಇತರ ಅಧಿಕಾರಿಗಳು ಹಾಜರಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ