ಗ್ಯಾರಂಟಿ ಸೌಲಭ್ಯ ಪಡೆದ ಮಹಿಳೆಯರಲ್ಲಿ ಕೈ ಸದಸ್ಯತ್ವದ ಬೇಡಿಕೆಯಿಟ್ಟ ಸೌಮ್ಯ ರೆಡ್ಡಿ

Sampriya

ಶನಿವಾರ, 14 ಸೆಪ್ಟಂಬರ್ 2024 (19:38 IST)
ಬೆಂಗಳೂರು:  ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಬೆಂಗಳೂರಿನಲ್ಲಿ ಮಹಿಳಾ ಕಾಂಗ್ರೆಸ್ ಸ್ಥಾಪನೆ ಮಾಡಿ ಸೆಪ್ಟೆಂಬರ್ 15ಕ್ಕೆ 40 ವರ್ಷಗಳು ಪೂರ್ಣಗೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ನಾವು ಮಹಿಳಾ ಕಾಂಗ್ರೆಸ್ ಸದಸ್ಯತ್ವ ನೋಂದಣಿ ಅಭಿಯಾನ ಮಾಡುತ್ತಿದ್ದೇವೆ ಎಂದು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೌಮ್ಯ ರೆಡ್ಡಿ ಹೇಳಿದರು.

ಜಿಲ್ಲೆ, ಬ್ಲಾಕ್ ಹಾಗೂ ಹಳ್ಳಿಗಳ ಮಟ್ಟದಲ್ಲಿ ಈ ಅಭಿಯಾನ ಮಾಡಲು ತೀರ್ಮಾನಿಸಿದ್ದೇವೆ. ರಾಜ್ಯಾದ್ಯಂತ ಮಹಿಳೆಯರು ಮಹಿಳಾ ಕಾಂಗ್ರೆಸ್ ಸೇರಿ ಕೈ ಜೋಡಿಸಬೇಕು ಎಂದು ಮನವಿ ಮಾಡುತ್ತೇನೆ.

ಕರ್ನಾಟಕ ರಾಜ್ಯದಲ್ಲಿ ಮಹಿಳೆಯರಿಗಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಗೃಹಲಕ್ಷ್ಮೀ ಯೋಜನೆ 1.21 ಕೋಟಿ ಮಹಿಳೆಯರಿಗೆ ತಲುಪಿದೆ. ಗೃಹಜ್ಯೋತಿ 1.60 ಕೋಟಿ ಮನೆಗಳನ್ನು ತಲುಪಿದೆ. ಶಕ್ತಿ ಯೋಜನೆಯಲ್ಲಿ ಮಹಿಳೆಯರು 283 ಕೋಟಿ ಟ್ರಿಪ್ ನಷ್ಟು ಉಚಿತ ಪ್ರಯಾಣ ಮಾಡಿದ್ದಾರೆ.

ದೇಶದ ಜನಸಂಖ್ಯೆಯಲ್ಲಿ ಸುಮಾರು 50% ಮಹಿಳೆಯರು ಇದ್ದಾರೆ. ಕಳೆದ ಹತ್ತು ವರ್ಷಗಳ ಬಿಜೆಪಿ ಸರ್ಕಾರದ ಆಡಳಿತ ಅವಧಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಿವೆ. ಮಹಿಳೆಯರಿಗೆ ಸಿಗಬೇಕಾದ ಹಕ್ಕು, ಸ್ಥಾನಮಾನ ಹಾಗೂ ರಕ್ಷಣೆ ಸಿಗುತ್ತಿಲ್ಲ. ದೇಶದಲ್ಲಿ ಮಹಿಳೆಯರಿಗೆ ರಾಜಕೀಯವಾಗಿ 33% ಮೀಸಲಾತಿ ನೀಡುವ ಮಸೂದೆ ಬಗ್ಗೆ ಚರ್ಚೆ ಆರಂಭವಾಗಿ 30 ವರ್ಷಗಳೇ ಕಳೆದಿವೆ.

ಚುನಾವಣೆ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಮಸೂದೆ ಮಂಡನೆ ಮಾಡಿತು. ಇದನ್ನು ಆದಷ್ಟು ಬೇಗ ಜಾರಿಗೆ ತರಬೇಕು ಎಂದು ನಮ್ಮ ಮಹಿಳಾ ಕಾಂಗ್ರೆಸ್ ವತಿಯಿಂದ ನಾರಿ ನ್ಯಾಯ ಎಂಬ ಅಭಿಯಾನ ಆರಂಭಿಸಲಾಯಿತು. ಬೇರೆ ರಾಜ್ಯಗಳ ಚುನಾವಣೆ ಸಮೀಪಿಸುತ್ತಿದ್ದು ಆದಷ್ಟು ಬೇಗ ಇದನ್ನು ಜಾರಿಗೆ ತರಬೇಕು.

ದೇಶದಲ್ಲಿ ಉನ್ನಾವೋ, ಕಥುವಾ, ಕೊಲ್ಕತ್ತಾದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ನೋಡಿದ್ದೇವೆ. ಪ್ರತಿ ಬಾರಿ ನಾವು ಹೋರಾಟ ಮಾಡುತ್ತೇವೆ.  ಮಹಿಳೆಯರನ್ನು ದೇವಿ ಎಂದು ಪೂಜೆ ಮಾಡುವ ದೇಶದಲ್ಲಿ ನಮಗೆ ಸಮಾನತೆ, ಹಕ್ಕು, ರಕ್ಷಣೆ ಸಿಗಬೇಕು.

ನನ್ನನ್ನು ಭೇಟಿ ಮಾಡಿದ ಅನೇಕ ಯುವತಿಯರು, ಮಹಿಳೆಯರು ಮಹಿಳಾ ಕಾಂಗ್ರೆಸ್ ಸದಸ್ಯರಾಗಲು ಇಚ್ಛೆ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ