ಯೆಮನ್: ಇಲ್ಲಿನ ಸ್ಥಳೀಯ ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಮರಣದಂಡನೆಗೆ ಗುರಿಯಾಗಿರುವ ನಿಮಿಷ ಪ್ರಿಯಗೆ ಸಂತ್ರಸ್ತನ ಕುಟುಂಬದಿಂದ ಕ್ಷಮೆ ಸಿಗಬಹುದೇನೋ ಎಂಬ ಆಸೆ ಕ್ಷೀಣವಾಗುತ್ತಿದೆ.
ಕೇರಳ ಮೂಲದ ನರ್ಸ್ ನಿಮಿಷ ಪ್ರಿಯಗೆ ಈಗ ಒಂದೊಂದು ನಿಮಿಷವೂ ನರಕಸದೃಶವಾಗಿದೆ. ಕೇರಳದ ಪಾಲಕ್ಕಾಡ್ ಮೂಲದ ನಿಮಿಷ ಪ್ರಿಯ ನರ್ಸ್ ಕೆಲಸಕ್ಕೆಂದು ಯೆಮನ್ ಗೆ ಹೋಗಿದ್ದರು. ಅಲ್ಲಿನ ನಿಯಮದ ಪ್ರಕಾರ ಸ್ಥಳೀಯ ಮೆಹ್ದಿ ಎಂಬಾತನ ಸಹಾಯದೊಂದಿಗೆ ಕ್ಲಿನಿಕ್ ಸ್ಥಾಪಿಸಿದ್ದಳು.
ಆದರೆ ಮೆಹ್ದಿ ಆಕೆಯ ಪಾಸ್ ಪೋರ್ಟ್ ಕೊಡದೇ ಕಾಟ ಕೊಟ್ಟಿದ್ದ. ಇದರಿಂದ ಬೇಸತ್ತ ಆಕೆ ಆತನಿಗೆ ಅಮಲು ಬರುವ ಇಂಜೆಕ್ಷನ್ ನೀಡಿ ಪಾಸ್ ಪೋರ್ಟ್ ಪಡೆಯಲು ಪ್ಲ್ಯಾನ್ ಮಾಡಿದ್ದಳು. ಆದರೆ ಇಂಜೆಕ್ಷನ್ ಓವರ್ ಡೋಸ್ ಆದ ಕಾರಣ ಆತ ಸಾವನ್ನಪ್ಪಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ 2017 ರಿಂದ ನಿಮಿಷ ಪ್ರಿಯ ಜೈಲು ಸೇರಿದ್ದಾಳೆ. ಇದೀಘ ಆಕೆಗೆ ಮರಣದಂಡನೆ ಶಿಕ್ಷೆ ಅಥವಾ ಮೃತನ ಕುಟುಂಬಕ್ಕೆ ದೊಡ್ಡ ಮೊತ್ತದ ಪರಿಹಾರ ಹಣ ಶಿಕ್ಷೆ ವಿಧಿಸಲಾಗಿತ್ತು.
ಇಂದು ನಿಮಿಷ ಪ್ರಿಯಗೆ ಗಲ್ಲು ಶಿಕ್ಷೆ ಜಾರಿಯಾಗಬೇಕಿತ್ತು. ಆದರೆ ಭಾರತ ಸರ್ಕಾರದಿಂದ, ಧರ್ಮ ಗುರುಗಳಿಂದ ಒತ್ತಡ ಹೇರಿದ್ದರ ಪರಿಣಾಮ ಯೆಮನ್ ನಲ್ಲಿ ಸೂಫಿ ಸಂತರು ಸಭೆ ನಡೆಸಿ ಗಲ್ಲು ಶಿಕ್ಷೆಯನ್ನು ಮುಂದೂಡಿದ್ದರು. ಇದರೊಂದಿಗೆ ಸಂತ್ರಸ್ತನ ಕುಟುಂಬದ ಜೊತೆ ಮಾತುಕತೆಗೆ ಮತ್ತೊಂದು ಅವಕಾಶ ಸಿಕ್ಕಿತ್ತು.
ಆದರೆ ಇದೀಗ ಮೆಹ್ದಿ ಕುಟುಂಬ ಯಾವುದೇ ಕಾರಣಕ್ಕೂ ನಾವು ಪರಿಹಾರ ಹಣ ಸ್ವೀಕರಿಸಲ್ಲ ಎಂದಿದೆ. ನಿಮಿಷ ಪ್ರಿಯಗೆ ಗಲ್ಲು ಶಿಕ್ಷೆ ಜಾರಿಯಾಗಲೇಬೇಕು. ಇದರ ಹೊರತಾಗಿ ಯಾವುದೇ ಸಂಧಾನಕ್ಕೆ ನಾವು ಸಿದ್ಧರಿಲ್ಲ ಎಂದು ಮೆಹ್ದಿ ಸಹೋದರ ಹೇಳಿಕೆ ನೀಡಿದ್ದಾನೆ.
ನಾವು ಸಹೋದರನ ಸಾವು, ಸಾವಿನ ನಂತರ ವಿಚಾರಣೆ ನೆಪದಲ್ಲಿ ಸಾಕಷ್ಟು ಮಾನಸಿಕ ಹಿಂಸೆ ಅನುಭವಿಸಿದ್ದೇವೆ. ಅದಕ್ಕೆಲ್ಲಾ ಪರಿಹಾರ ಸಿಗಬೇಕು ಎಂದರೆ ನಿಮಿಷ ಪ್ರಿಯಗೆ ಗಲ್ಲು ಶಿಕ್ಷೆಯಾಗಲೇ ಬೇಕು ಎಂದು ಆಗ್ರಹಿಸಿದ್ದಾನೆ. ಇದೀಗ ನಿಮಿಷ ಪ್ರಿಯ ತನ್ನ ಜೀವದ ಕತೆ ಮುಂದೇನೋ ಎಂದು ಒಂದೊಂದು ನಿಮಿಷವೂ ನರಕಸದೃಶವಾಗಿ ಜೈಲಿನಲ್ಲಿ ಕಳೆಯುವಂತಾಗಿದೆ.